ನವದೆಹಲಿ:
ರಾಜ್ಯಸಭೆಯಲ್ಲಿ ಭಾಷಣ ಮಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸಂಸದರೊಬ್ಬರ ಮೇಲೆ ಆಕ್ರೋಶಗೊಂಡಿದ್ದಾರೆ. ಬಿಜೆಪಿ ಸಂಸದ ಮತ್ತು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಸದನದಲ್ಲಿ ಖರ್ಗೆ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅವರು ನಿಮ್ಮ ಅಪ್ಪ ನಾನು ಸಮಕಾಲೀನರು. ಜೊತೆಗೆ ಕೆಲಸ ಮಾಡಿದವರು. ನೀವು ಆಗ ಎಲ್ಲಿದ್ರಿ? ಸುಮ್ಮನೆ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ ಎಂದು ರೇಗಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮೇಲ್ಮನೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರು ಅಮೆರಿಕನ್ ಡಾಲರ್ ವಿರುದ್ಧ ಭಾರತದ ರೂಪಾಯಿ ಕುಸಿತವಾಗುತ್ತಿರುವ ಕುರಿತು ಮಾತನಾಡುತ್ತಿದ್ದಾಗ ನೀರಜ್ ಶೇಖರ್ ಅವರಿಗೆ ಅಡ್ಡಿಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಖರ್ಗೆ ನೀರಜ್ ವಿರುದ್ಧ ಗರಂ ಆಗಿದ್ದಾರೆ. “ನಾನು ನಿಮ್ಮ ತಂದೆ ಇಬ್ಬರು ಒಡನಾಡಿಗಳು. ಒಟ್ಟಿಗೆ ಬಹಳ ವರ್ಷಗಳ ಕಾಲ ಕೆಲಸ ಮಾಡಿದ್ದೇವೆ.
ನೀವು ಏನು ಮಾತನಾಡುತ್ತಿದ್ದೀರಿ? ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ” ಎಂದು ವಾಗ್ದಾಳಿ ನಡೆಸಿದ್ದಾರೆ. ಇಬ್ಬರ ನಡುವೆಯೂ ವಾಕ್ ಸಮರ ನಡೆದಿದ್ದು, ಸದನದಲ್ಲಿ ಕೋಲಾಹಲ ಎದ್ದಿದೆ. ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಇಬ್ಬರನ್ನೂ ಶಾಂತವಾಗಿರಿಸಲು ಪ್ರಯತ್ನಿಸಿದ್ದಾರೆ. ಮಹಾ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ 1,000 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಗಂಭೀರ ಆರೋಪ ಮಾಡಿದ್ದರು. ಖರ್ಗೆ ಹೇಳಿಕೆಯಿಂದಾಗಿ ಸದನದಲ್ಲಿ ಗಲಭೆ ಎದ್ದಿತ್ತು ನಾನು ಹೇಳಿದ್ದೇನೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು ಒಂದು ವೇಳೆ ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ಸಾವಿನ ಸಂಖ್ಯೆಯ ನಿಖರವಾದ ವರದಿಯನ್ನು ಬಿಡುಗಡೆ ಮಾಡಲಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲಿಂದು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಜನವರಿ 29ರಂದು ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮಡಿದ ʻಸಾವಿರಾರುʼ ಜನರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ತಿಳಿಸಿದ್ದರು. ಈ ವೇಳೆ ಸಭಾಪತಿ ಜಗದೀಪ್ ಧನಕರ್ ಅವರು ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದರು.