ಕೋಲ್ಕತ್ತಾ:
ಅತ್ಯಾಚಾರ ಪ್ರಕರಣಗಳ ಬಗ್ಗೆ ತಮ್ಮ ಸರ್ಕಾರ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಪರಾಧಿಗಳಿಗೆ ಮರಣದಂಡನೆ ಖಚಿತಪಡಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ತಿದ್ದುಪಡಿ ಮಾಡಲು ಮುಂದಿನ ವಾರ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಲಾಗುವುದು ಎಂದು ಬುಧವಾರ ಹೇಳಿದ್ದಾರೆ.
ಒಂದು ವೇಳೆ ರಾಜ್ಯಪಾಲರು ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಲು ವಿಳಂಬ ಮಾಡಿದರೆ ಅಥವಾ ರಾಷ್ಟ್ರಪತಿಗಳಿಗೆ ರವಾನಿಸಿದರೆ ರಾಜಭವನದ ಹೊರಗೆ ಧರಣಿ ನಡೆಸುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಟಿಎಂಸಿ ಶನಿವಾರದಿಂದ ಪ್ರತಿಭಟನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. “ಮುಂದಿನ ವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಾವು ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುತ್ತೇವೆ. ನಂತರ ನಾವು ಅದನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸುತ್ತೇವೆ. ಅವರು ಮಸೂದೆಗೆ ಒಪ್ಪಿಗೆ ನೀಡದಿದ್ದರೆ ನಾವು ರಾಜಭವನದ ಹೊರಗೆ ಧರಣಿ ಮಾಡುತ್ತೇವೆ” ಎಂದು ದೀದಿ ಹೇಳಿದ್ದಾರೆ.
ಇದೇ ವೇಳೆ ಕಳೆದ 20 ದಿನಗಳಿಂದ ಕೆಲಸ ಸ್ಥಗಿತಗೊಳಿಸಿರುವ ಬಂಗಾಳದ ಧರಣಿ ನಿರತ ಕಿರಿಯ ವೈದ್ಯರು ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದರು.
“ವೈದ್ಯರು ತಮ್ಮ ಸಹೋದ್ಯೋಗಿಯ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅವರ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ಘಟನೆ ನಡೆದು ಹಲವು ದಿನಗಳು ಕಳೆದರೂ ನಾವು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ಆದರೆ ದಯವಿಟ್ಟು ರೋಗಿಗಳ ಆರೈಕೆಗಾಗಿ ಕೆಲಸಕ್ಕೆ ಹಿಂತಿರುಗಿ” ಎಂದು ಮಮತಾ ಮನವಿ ಮಾಡಿದರು.
ಇದೇ ವೇಳೆ 12 ಗಂಟೆಗಳ ಬಂದ್‌ಗೆ ಕರೆ ನೀಡಿರುವ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬ್ಯಾನರ್ಜಿ, “ಹೆಣದ ಮೇಲೆ ರಾಜಕೀಯ ಲಾಭ ಪಡೆಯಲು ಅವರು ಬಂದ್‌ಗೆ ಕರೆ ನೀಡಿದ್ದಾರೆ. ಸಾವಿನ ಮನೆಯಲ್ಲಿ ಬಿಜೆಪಿ ಸಾಮಾನ್ಯ ಜನರ ಭಾವನೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸಂತ್ರಸ್ತೆಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಸಿಗದಂತೆ ವೈದ್ಯೆಯ ಸಾವಿನ ತನಿಖೆಯನ್ನು ಹಳಿತಪ್ಪಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.