ತಿರುವನಂತಪುರಂ :
ಮಲಯಾಳಂ ನಟಿ ಮಮತಾ ಮೋಹನ್‌ದಾಸ್ ವಯಸ್ಸು 39ರ ಸಮೀಪದಲ್ಲಿದ್ದರೂ ನೋಡಲು ಚಿರಯುವತಿಯಂತೆ ಕಾಣುತ್ತಾರೆ. ನಟಿ ಮಾತ್ರವಲ್ಲದೆ, ಹಿನ್ನೆಲೆ ಗಾಯಕಿ ಹಾಗೂ ಸಿನಿಮಾ ನಿರ್ಮಾಪಕಿಯಾಗಿ ಕೂಡ ಗುರುತಿಸಿಕೊಂಡಿರುವ ಅವರು, ತಮಿಳು, ತೆಲುಗು ಚಿತ್ರರಂಗದಲ್ಲಿಯೂ ಫುಲ್ ಆಕ್ಟಿವ್ ಆಗಿದ್ದಾರೆ.
2005ರಲ್ಲಿ ಮಲಯಾಳಂ ಸಿನಿಮಾ ಮೂಲಕ ಆಕ್ಟಿಂಗ್ ಕೆರಿಯರ್ ಶುರು ಮಾಡಿದ ಮಮತಾ ಮೋಹನ್‌ದಾಸ್, 2006ರಲ್ಲಿ ಗಾಯಕಿಯಾಗಿ ಟಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. 2010ರಲ್ಲಿ ಮಲಯಾಳಂ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಸಹ ಲಭಿಸಿದ್ದವು. ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಅವರಿಗೆ ಒಲಿದು ಬಂದಿದ್ದು, ‘ಮಮತಾ ಮೋಹನ್‌ದಾಸ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಟಿ ಮಮತಾ ಮೋಹನ್‌ದಾಸ್ ಅವರಿಗೆ ಕಾರುಗಳ ಮೇಲೆ ವಿಶೇಷವಾದ ಪ್ರೀತಿಯಿದೆ. ಅದರಲ್ಲೂ ಪೋರ್ಷೆ ಕಾರುಗಳನ್ನು ತುಂಬಾ ಇಷ್ಟಪಡುತ್ತಾರೆ. ಮಲಯಾಳಂ ಸಿನಿರಂಗದಲ್ಲಿಯೇ ಮಮತಾ ಅವರು ‘ಪೋರ್ಷೆ 911 ಕ್ಯಾರೆರಾ’ ಕಾರನ್ನು ಖರೀದಿಸಿದ್ದ ಮೊದಲ ಸೆಲೆಬ್ರಿಟಿಯೂ ಆಗಿದ್ದಾರೆ. ಸದ್ಯ ಹೊಚ್ಚ ಹೊಸ ‘ಪೋರ್ಷೆ ಟೇಕಾನ್’ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಕೊಂಡುಕೊಂಡಿದ್ದಾರೆ. ಆದರೆ, ಯಾವ ರೂಪಾಂತರ (ವೇರಿಯೆಂಟ್)ವನ್ನು ತೆಗೆದುಕೊಂಡಿದ್ದಾರೆ ಎನ್ನುವರ ಬಗ್ಗೆ ಹೆಚ್ಚಿನ ವಿವರಗಳಿಲ್ಲ.
ದೇಶೀಯ ಮಾರುಕಟ್ಟೆಯಲ್ಲಿ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರು ರೂ.1.61 ರಿಂದ ರೂ.2.44 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 89 ಕೆಡಬ್ಲ್ಯೂಹೆಚ್ ಹಾಗೂ 105 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 400 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. ಜೊತೆಗೆ ಸಿಂಗಲ್ & ಡುಯಲ್ ಮೋಟಾರ್‌ನೊಂದಿಗೂ ಸಿಗುತ್ತದೆ.
ಈ ಪೋರ್ಷೆ ಟೇಕಾನ್ ಕಾರು 260 ಕೆಎಂಪಿಹೆಚ್ ಟಾಪ್ ಸ್ಪೀಡ್ (ಗರಿಷ್ಠ ವೇಗ) ಹೊಂದಿದ್ದು, ಕೇವಲ 2.8 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯುತ್ತದೆ. 10.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, 4-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 8 ಏರ್ ಬ್ಯಾಗ್, ಪಾರ್ಕ್ ಅಸಿಸ್ಟ್ ಸಿಸ್ಟಮ್, ಲೇನ್ ಕೀಪ್ ಅಸಿಸ್ಟ್ ಹಾಗೂ ರಿವರ್ಸ್ ಕ್ಯಾಮೆರಾವನ್ನು ಹೊಂದಿದೆ.
ನಟಿ ಮಮತಾ ಮೋಹನ್‌ದಾಸ್ ಹಳೆಯ ಪೋರ್ಷೆ 911 ಕ್ಯಾರೆರಾ ಕಾರನ್ನು ಮಾರಾಟ ಮಾಡಿ, ನೂತನ ಪೋರ್ಷೆ ಟೇಕಾನ್ ಎಲೆಕ್ಟ್ರಿಕ್ ಕಾರನ್ನು ಕೊಂಡುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಖಚಿತತೆಯಿಲ್ಲ. ಅವರು ಬಿಎಂಡಬ್ಲ್ಯೂ ಝಡ್4 (BMW Z4) ಸ್ಪೋರ್ಟ್ಸ್ ಕಾರಿನ ಒಡತಿಯೂ ಆಗಿದ್ದಾರೆ. ಈ ಕಾರು, ರೂ.90.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 3.0-ಲೀಟರ್, 6-ಸಿಲಿಂಡರ್ ಟ್ವಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ.