ಕಾರಿನ ಬಾಗಿಲಿನಲ್ಲಿ ಹೆಬ್ಬೆರಳು ಸಿಕ್ಕಿಬಿದ್ದರೂ ವ್ಯಕ್ತಿಯನ್ನು ಅರ್ಧ ಕಿ.ಮೀ ಎಳೆದೊಯ್ದ ಚಾಲಕ!

ವಯನಾಡು: 

   ಕೇರಳದ ವಯನಾಡು ಜಿಲ್ಲೆಯ ರಸ್ತೆಯೊಂದರಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬರ ಹೆಬ್ಬೆರಳು ಕಾರಿನ ಬಾಗಿಲಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಅಪರಿಚಿತ ಗ್ಯಾಂಗ್ ಸುಮಾರು ಅರ್ಧ ಕಿಲೋಮೀಟರ್ ಎಳೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

   ಡಿಸೆಂಬರ್ 15 ರಂದು ಸಂಜೆ ವಯನಾಡಿನ ಮಾನಂತವಾಡಿಯ ಕೂಡಲ್ ಕಡವು ಚೆಕ್ ಡ್ಯಾಂ ಬಳಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಗಳನ್ನು ಇಂದು ದೂರದರ್ಶನ ವಾಹಿನಿ ಪ್ರಸಾರ ಮಾಡಿದೆ.ಚೆಕ್ ಡ್ಯಾಂ ನೋಡಲು ಬಂದ ಪ್ರವಾಸಿಗರೆಂದು ಶಂಕಿಸಲಾದ ಕಾರಿನಲ್ಲಿದ್ದವರು, ಚೆಮ್ಮಾಡು ಬಡಾವಣೆಯ ಮಥನ್ ಎಂಬುವವರನ್ನು ಎಳೆದೊಯ್ದ ಪರಿಣಾಮ ಅವರ ಕೈ, ಸೊಂಟ ಮತ್ತು ಕಾಲುಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

   “ನಮಗೆ ಬಂದ ಮಾಹಿತಿಯ ಪ್ರಕಾರ, ಭಾನುವಾರ ಈ ಪ್ರದೇಶಕ್ಕೆ ಭೇಟಿ ನೀಡಿದ ಎರಡು ಪ್ರವಾಸಿಗರ ತಂಡಗಳ ನಡುವೆ ಕೆಲ ಸಮಯ ವಾಗ್ವಾದ ನಡೆದಿದೆ. ಈ ವೇಳೆ ಮಥನ್ ಸೇರಿದಂತೆ ಕೆಲ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಯತ್ನಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರು ತರಾತುರಿಯಲ್ಲಿ ಬಾಗಿಲು ಹಾಕಿಕೊಂಡು ಕಾರು ಚಲಾಯಿಸುವಾಗ ಮಥನ್ ಅವರ ಹೆಬ್ಬರಳು ಬಾಗಿಲಿನಲ್ಲಿ ಸಿಕ್ಕಿಕೊಂಡಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 49 ವರ್ಷದ ಬುಡಕಟ್ಟು ವ್ಯಕ್ತಿಯ ಹೆಬ್ಬೆರಳು ಕಾರಿನ ಬಾಗಿಲಿಗೆ ಸಿಕ್ಕಿಹಾಕಿಕೊಂಡಿದ್ದು, ವಾಹನದಲ್ಲಿದ್ದವರು ಕಾರು ನಿಲ್ಲಿಸುವಂತೆ ಪದೇ ಪದೇ ಕೂಗಿದರೂ ಸುಮಾರು ಅರ್ಧ ಕಿಲೋಮೀಟರ್ ರಸ್ತೆಯ ಉದ್ದಕ್ಕೂ ಅತನನ್ನು ಎಳೆದೊಯ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    ಕಾರಿನೊಳಗೆ ಕನಿಷ್ಠ ನಾಲ್ವರು ಪುರುಷರು ಇದ್ದರು ಮತ್ತು ಅವರು ಈ ಪ್ರದೇಶದಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾದರು. ನಂತರ ಮಥನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದ್ದಾರೆ.

    ಘಟನೆಯ ಕುರಿತು ಮಾನಂತವಾಡಿ ಪೊಲೀಸರು ಸೆಕ್ಷನ್ 110(ಅಪರಾಧ ನರಹತ್ಯೆಗೆ ಯತ್ನ) ಸೇರಿದಂತೆ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Recent Articles

spot_img

Related Stories

Share via
Copy link