ಇಡಿ ಅಧಿಕಾರಿಗಳು ನನ್ನನ್ನು ಬಂಧಿಸಲು ಬಂದಿದ್ದಾರೆ’: ಅಮಾನತುಲ್ಲಾ ಖಾನ್

ನವದೆಹಲಿ:

    ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯದ (ED) ತಂಡವು ಪ್ರಸ್ತುತ ದೆಹಲಿಯಲ್ಲಿರುವ ಅವರ ಮನೆಯಲ್ಲಿದೆ. ಈ ಕುರಿತು ಸ್ವತಃ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದು ಯಾವುದೇ ಕ್ಷಣದಲ್ಲಿ ಅವರು ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.

   ದೆಹಲಿ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಹಣಕಾಸು ಅಕ್ರಮಗಳನ್ನು ಒಳಗೊಂಡಿರುವ ಆಪಾದಿತ ಹಣ ವರ್ಗಾವಣೆ ಪ್ರಕರಣದ ಕುರಿತು ಅಮಾನುತಲ್ಲಾ ಖಾನ್ ವಿರುದ್ಧ ತನಿಖೆ ನಡೆಯುತ್ತಿದೆ. ಇಡಿ ಅಧಿಕಾರಿಗಳು ನನ್ನನ್ನು ಬಂಧಿಸಲು ನನ್ನ ಮನೆಗೆ ಬಂದಿದ್ದಾರೆ ಎಂದು ಅಮಾನತುಲ್ಲಾ ಖಾನ್ ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಓಖ್ಲಾ ಕ್ಷೇತ್ರದ ಶಾಸಕರಾಗಿರುವ ಅಮಾನುತಲ್ಲಾ ಖಾನ್ ಬಂಧನಕ್ಕೆ ಕಾರಣವನ್ನು ಉಲ್ಲೇಖಿಸಿಲ್ಲ. ಅವರ ಪೋಸ್ಟ್‌ಗೆ ಜಾರಿ ನಿರ್ದೇಶನಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ತನಿಖಾ ಸಂಸ್ಥೆ ಕಳೆದ ಏಪ್ರಿಲ್ ನಲ್ಲಿ ಅಮಾನತುಲ್ಲಾ ಖಾನ್ ನನ್ನು 14 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

   ಆಪ್ ನಾಯಕ ಸಂಜಯ್ ಸಿಂಗ್ ಕೂಡ ಸುದ್ದಿಯನ್ನು ದೃಢಪಡಿಸಿದ್ದಾರೆ ಮತ್ತು ಆಪಾದಿತ ದಾಳಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇಡಿ ಅಧಿಕಾರಿಗಳು ಬೆಳಗ್ಗೆ ಅಮಾನತುಲ್ಲಾ ಖಾನ್ ಅವರ ನಿವಾಸಕ್ಕೆ ದಾಳಿ ನಡೆಸಿ ಅವರ ನಿವಾಸವನ್ನು ತಲುಪಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಆಪಾದಿತ ದಾಳಿಗೆ ಪ್ರಧಾನಿ ನರೇಂದ್ರ ಮತ್ತು ತನಿಖಾ ಸಂಸ್ಥೆಯನ್ನು ಟೀಕಿಸಿದ್ದಾರೆ. ವಿಡಿಯೊದಲ್ಲಿ ಏಜೆನ್ಸಿ ಕಳುಹಿಸುತ್ತಿರುವ ಎಲ್ಲಾ ನೋಟಿಸ್‌ಗಳಿಗೆ ನಾನು ಉತ್ತರಿಸುತ್ತಿದ್ದೇನೆ ಎಂದು ಅಮಾನತುಲ್ಲಾ ಖಾನ್ ಹೇಳಿದ್ದಾರೆ.

   ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಸೇರಿದಂತೆ ಹಲವಾರು ಆಮ್ ಆದ್ಮಿ ಪಕ್ಷದ (AAP) ನಾಯಕರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಧ್ವನಿ ಎತ್ತುವವರನ್ನು ತನಿಖಾ ಏಜೆನ್ಸಿಗಳು ಗುರಿಯಾಗಿಸುತ್ತಿವೆ ಎಂದು ಆರೋಪಿಸಿದ್ದಾರೆ.

  ಬಿಜೆಪಿ ವಿರುದ್ಧ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕುವುದು ಮತ್ತು ಅದನ್ನು ಮುರಿಯುವುದು ತನಿಖಾಧಿಕಾರಿಗಳು ಮಾಡುತ್ತಿರುವ ಕೆಲಸವಾಗಿದೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.