ಮ್ಯಾಂಚೆಸ್ಟರ್:
ಹಲವರ ಗಾಯ, ಫಿಟ್ನೆಸ್ ಸಮಸ್ಯೆಯಿಂದಾಗಿ ನಲುಗಿ ಹೋಗಿರುವ ಟೀಮ್ ಇಂಡಿಯಾ ಬುಧವಾರದಿಂದ ಆರಂಭವಾಗುವ ನಿರ್ಣಾಯಕ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಆದರೆ ಪಂದ್ಯದ ಮೊದಲ ದಿನವೇ ಭಾರೀ ಮಳೆ ಭೀತಿ ಎದುರಾಗಿದೆ.
ಹೌದು, ಮ್ಯಾಂಚೆಸ್ಟರ್‌ನಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆಯಿದೆ. ಮೊದಲ ದಿನ(ಜು.23) ಶೇ.60ರಷ್ಟು ಮಳೆ ನಿರೀಕ್ಷೆಯಿದೆ. ಉಳಿದ 4 ದಿನಗಳಲ್ಲೂ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ 1936ರಿಂದ ಟೆಸ್ಟ್ ಆಡುತ್ತಿದೆ. ಆದರೆ ಒಮ್ಮೆಯೂ ಗೆದ್ದಿಲ್ಲ. 9 ಪಂದ್ಯಗಳ ಪೈಕಿ 4ರಲ್ಲಿ ಸೋತಿದ್ದರೆ, 5 ಡ್ರಾಗೊಂಡಿದೆ. ಇಂಗ್ಲೆಂಡ್ ಮ್ಯಾಂಚೆಸ್ಟರ್‌ನಲ್ಲಿ 86 ಟೆಸ್ಟ್ ಆಡಿದೆ. 35ರಲ್ಲಿ ಗೆದ್ದಿದ್ದು, 15ರಲ್ಲಿ ಸೋತಿದೆ. 36 ಪಂದ್ಯ ಡ್ರಾಗೊಂಡಿವೆ. ಟೀಂ ಇಂಡಿಯಾ ಇಲ್ಲಿ ಕೊನೆ ಬಾರಿ ಆಡಿದ್ದು 2014ರಲ್ಲಿ. ಆ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 54 ರನ್‌ನಿಂದ ಸೋತಿತ್ತು.
ಸಚಿನ್ ತೆಂಡೂಲ್ಕರ್ ಅವರು ಈ ಮೈದಾನದಲ್ಲಿ ಶತಕ ಬಾರಿಸಿದ ಕೊನೆಯ ಭಾರತೀಯ ಬ್ಯಾಟರ್. ಅವರ ಬಳಿಕ ಇದುವರೆಗೂ ಯಾರೂ ಶತಕ ಬಾರಿಸಿಲ್ಲ. ವಿಶೇಷ ಎಂದರೆ ಅದು ಸಚಿನ್ ಬಾರಿಸಿದ ಮೊಲ ಅಂತರಾಷ್ಟ್ರೀಯ ಶತಕವಾಗಿತ್ತು. ಮೊದಲ ಶತಕ ಬಾರಿಸಿದಾಗ ಅವರಿಗಿನ್ನೂ 17 ವರ್ಷ. ಹೌದು, 1990 ಆಗಸ್ಟ್ 14ರಂದು ಸಚಿನ್ ತೆಂಡೂಲ್ಕರ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 17 ವರ್ಷ 112 ದಿನ ಪ್ರಾಯದ ಸಚಿನ್ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದರು.
ಓಲ್ಡ್ ಟ್ರಾಫರ್ಡ್ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಸಚಿನ್ ಈ ಶತಕದ ಆಟವಾಡಿದ್ದರು. ಇದರ ಸಹಾಯದಿಂದ ಭಾರತ ತಂಡ ಈ ಪಂದ್ಯವನ್ನು ಡ್ರಾ ಮಾಡಲು ಸಾಧ್ಯವಾಯಿತು. ಈ ಬಾರಿಯಾದರೂ ಭಾರತೀಯ ಬ್ಯಾಟರ್‌ಗಳು ಶತಕ ಬಾರಿಸುತ್ತಾರಾ ಎಂದು ಕಾದು ನೋಡಬೇಕಿದೆ.
