ಮಂಡ್ಯ:
ನೀರಾವರಿಯಲ್ಲಿ ಕೆರೆಗಳ ಪಾತ್ರವೂ ಪ್ರಮುಖವಾಗಿವೆ. ಕೆರೆಗಳ ಪ್ರಾಮುಖ್ಯತೆಯನ್ನು ಅರಿತು ಹಿಂದಿನ ಕಾಲದಲ್ಲಿ ಸೂಕ್ತ ಸ್ಥಳದಲ್ಲಿ ಕೆರೆಗಳನ್ನು ನಿರ್ಮಿಸಲಾಗಿತ್ತು. ಆದರೆ ಕಾಲಕ್ರಮೇಣ ಕೆರೆಗಳ ಬಗೆಗಿನ ನಿರ್ಲಕ್ಷ್ಯ ಮತ್ತು ವಾತಾವರಣದಲ್ಲಿ ಆದ ಏರುಪೇರು, ಜನವಸತಿಗಳ ಹೆಚ್ಚಳದಿಂದಾಗಿ ಸದ್ದಿಲ್ಲದೆ ಕೆರೆಗಳು ಒತ್ತುವರಿಯಾಗಿ ಅವುಗಳ ಮೇಲೆ ಬಡಾವಣೆಗಳು ನಿರ್ಮಾಣವಾದರೆ, ಮತ್ತೆ ಕೆಲವು ಕಡೆಗಳಲ್ಲಿ ನಿರ್ಲಕ್ಷ್ಯಕ್ಕೊಳಗಾದವು. ಇದೆಲ್ಲದರ ಪರಿಣಾಮವನ್ನು ಇವತ್ತು ನಾವು ಎದುರಿಸುವಂತಾಗಿದೆ.
ಒಂದು ಕಾಲದಲ್ಲಿ ಕೆರೆಗಳು ಕೃಷಿಕರ ಜಮೀನುಗಳಿಗೆ ನೀರುಣಿಸುತ್ತಿದ್ದವು. ಕೆರೆಗಳ ನೀರನ್ನು ನಂಬಿ ರೈತರು ಕೃಷಿ ಮಾಡುತ್ತಿದ್ದರು. ಆದರೆ ತದ ನಂತರದ ಕೆರೆಗಳನ್ನು ಅಭಿವೃದ್ಧಿಗೊಳಿಸದ ಕಾರಣದಿಂದಾಗಿ ಹೂಳು ತುಂಬಿ ಪಾಳು ಬೀಳುವಂತಾದವು. ಸರ್ಕಾರಗಳು ಕೆರೆಗಳತ್ತ ಆಸಕ್ತಿ ವಹಿಸದ ಕಾರಣದಿಂದಾಗಿ ಇವತ್ತು ಸಂಕಷ್ಟ ಅನುಭವಿಸುವಂತಾಗಿದೆ. ಆದರೆ ಕೆಲವು ವರ್ಷಗಳಿಂದ ಮುಂಗಾರು ಉತ್ತಮವಾಗಿ ಕೆರೆಗಳು ಕೋಡಿ ಬೀಳುವಂತಾಗಿದ್ದು, ಜನರಿಗೆ ಖುಷಿ ಕೊಡುತ್ತಿದೆ. ಕೆರೆಗಳು ಭರ್ತಿಯಾದರೆ ಅಂತರ್ಜಲ ಹೆಚ್ಚಾಗಲಿದ್ದು ರೈತರಿಗೂ ವರದಾನವಾಗಲಿದೆ.
ಇದೀಗ ಮಂಡ್ಯ ಜಿಲ್ಲಾಡಳಿತ ಕೆರೆಗಳತ್ತ ಆಸಕ್ತಿ ವಹಿಸಿರುವುದು ಖುಷಿ ಕೊಡುವ ಸಂಗತಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಿದ್ದು, ಈ ಪೈಕಿ ಕೆಲವು ಕೆರೆಗಳಂತು ತನ್ನದೇ ಆದ ಇತಿಹಾಸ ಹೊಂದಿವೆ. ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ಕೆರೆಗಳು ಗ್ರಾಮಗಳಲ್ಲಿನ ಜನಜಾನುವಾರುಗಳ ದಾಹ ತಣಿಸುತ್ತಿವೆ. ಕೃಷಿ ಚಟುವಟಿಕೆಗೂ ಸಹಕಾರಿಯಾಗಿವೆ. ಕಳೆದ ಐದು ವರ್ಷಗಳ ಹಿಂದೆ ಭಾರಿ ಮಳೆ ಸುರಿದಾಗ ಕೆರೆಕಟ್ಟೆಗಳು ತುಂಬಿ, ಕಟ್ಟೆಗಳು ಒಡೆದು ಹೋಗಿದ್ದವು ಆದರೆ ಅವುಗಳನ್ನು ದುರಸ್ಥಿ ಮಾಡಿ ಕೆರೆಗಳನ್ನು ಸಂರಕ್ಷಣೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.
ಇದೀಗ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತೆಗೆದುಕೊಂಡಿರುವ ನಿರ್ಧಾರ ರೈತರಲ್ಲಿ ಹರ್ಷ ತಂದಿದೆ. ಹಾಗೆಯೇ ಕೆರೆ ಒತ್ತುವರಿ ಮಾಡಿಕೊಂಡವರ ಎದೆ ಢವಢವ ಹೊಡೆದುಕೊಳ್ಳುತ್ತಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಸಮೀಕ್ಷೆ ನಡೆಸಿ 962 ಕೆರೆಗಳ ಅಳತೆಯನ್ನು ನಿಗದಿಪಡಿಸಲಾಗಿಸಿದೆ. ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ತಮ್ಮ ಕಚೇರಿಯಲ್ಲಿ ಕೆರೆ ಒತ್ತುವರಿ ತೆರವು ಸಮಿತಿ ಸಭೆ ನಡೆಸಿರುವ ಅವರು ಇಲಾಖೆವಾರು ವ್ಯಾಪ್ತಿಗೆ ಬರುವ ಕೆರೆಗಳ ಒತ್ತುವರಿ ಹಾಗೂ ತೆರವುಗೊಳಿಸಿದ ವಿವರವನ್ನು ಪಡೆದುಕೊಂಡಿದ್ದಾರೆ.
ಈ ಸಂಬಂಧ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಕೆರೆಗಳ ಸರ್ವೆ ಮಾಡಿಕೊಡಲಾಗಿದೆ. ಅಧಿಕಾರಿಗಳು ಮಹಜರ್ ಮಾಡಿ ಒತ್ತುವರಿ ತೆರವುಗೊಳಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿ. ಅದರ ಸಂರಕ್ಷಣೆ ಮಾಡಿಕೊಳ್ಳಲು ಯೋಜನೆ ರೂಪಿಸಿಕೊಂಡು ಅನುದಾನ ಪಡೆದು ಕ್ರಮ ಕೈಗೊಳ್ಳಿ. ಕೆರೆಗಳ ಸುತ್ತ ಆಗಿಂದಾಗ್ಗೆ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಿ. ಕೆರೆ ಒತ್ತುವರಿ ತೆರವು ಕುರಿತು ಸರ್ಕಾರಕ್ಕೆ ವರದಿ ನೀಡಬೇಕಿದ್ದು, ವರದಿಯನ್ನು ಶೀಘ್ರವಾಗಿ ಸಲ್ಲಿಸಿ ಎಂದು ಹೇಳಿದ್ದಾರೆ.
ಕೆರೆ ಸಂರಕ್ಷಣಾ ಸಮಿತಿ ರಚನೆಗೆ ಸಲಹೆ ಇದರ ಜೊತೆಗೆ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಜಿಲ್ಲಾ ಪಂಚಾಯತ್. ಹೆಚ್.ಎಲ್.ಬಿ.ಸಿ, ಕಾ.ನೀ.ನಿ.ನಿ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ 962 ಕೆರೆಗಳ ನೀರನ್ನು ಪರೀಕ್ಷೆಗೊಳಪಡಿಸಿ, ಪ್ರತಿ ಕೆರೆಗಳಿಗೂ ಸಹ ಜಿ.ಪಿ.ಎಸ್. ಮ್ಯಾಪಿಂಗ್ ಕಡ್ಡಾಯವಾಗಿ ಮಾಡಿಸಿ, ಕೆರೆ ನೀರು ಕಲುಷಿತವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಕೆರೆಗಳನ್ನು ಕಲುಷಿತ ಮಾಡದಂತೆ ಜಾಗೃತಿ ಸೂಚನ ಪಲಕಗಳನ್ನು ಅಳವಡಿಸಿ ಅದರ ಛಾಯಾಚಿತ್ರಗಳನ್ನು ಲಗತ್ತಿಸುವಂತೆ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಸಾರ್ವಜನಿಕರು ಕೆರೆ ಕಲುಷಿತಗೊಳಿಸದಂತೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನರಿಗೆ ಜಾಗೃತಿ ಮುಡಿಸಿ, ಕೆರೆಗಳ ನೀರನ್ನು ಕಲುಷಿತಗೊಳಿಸುವ ಸಾರ್ವಜನಿಕರ ವಿರುದ್ಧ ಕಠಿಣ ಕ್ರಮ ಜರುಗಿಸಿ, ದೂರು ನೀಡಲು ಜಿಲ್ಲಾ ಮಟ್ಟದಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಿ, ಕೆರೆಗಳನ್ನು ಸಂರಕ್ಷಿಸಲು ಸ್ಥಳೀಯವಾಗಿ ಕೆರೆ ಸಂರಕ್ಷಣ ಸಮಿತಿಯನ್ನು ರಚಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಸದ್ಯ ಜಿಲ್ಲಾಧಿಕಾರಿಗಳು ತೆಗೆದುಕೊಂಡಿರುವ ಕ್ರಮ ಗ್ರಾಮೀಣ ಪ್ರದೇಶದಲ್ಲಿ ಕೆರೆಗಳನ್ನು ಆಶ್ರಯಿಸಿರುವರಿಗೆ ಖುಷಿ ತಂದಿದೆ. ಹಾಗೆಯೇ ನಿರ್ಲಕ್ಷ್ಯಕ್ಕೊಳಗಾಗಿರುವ ಕೆರೆಗಳು ಅಭಿವೃದ್ಧಿ ಹೊಂದುತ್ತವೆಯಲ್ಲ ಎಂಬ ಸಂತೋಷವೂ ಮನೆ ಮಾಡಿದೆ.
![](https://prajapragathi.com/wp-content/uploads/2022/02/maralur-kere.jpg)