ಮಂಡ್ಯ :
ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೆ ಸಿಗೋದು ನೂರಕ್ಕೆ ನೂರರಷ್ಟು ಖಚಿತ ಎಂದು ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ನಾನು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ನನ್ನನ್ನು ಬರಲು ಹೇಳಿದರೆ ಮಾತ್ರ ಹೋಗುತ್ತೇನೆ. ಕರ್ನಾಟಕದ ಅಭ್ಯರ್ಥಿ ಪಟ್ಟಿ ಯಾವಾಗ ಬರುವುದೋ ಆಗಲೇ ನಮ್ಮದೂ ಬರಲಿದೆ ಎಂದು ತಿಳಿಸಿದರು.
ಚುನಾವಣೆ ತಯಾರಿ ಬಗ್ಗೆ ಯಾವುದೇ ನಿರ್ಧಿಷ್ಟ ಯೋಜನೆ ರೂಪಿಸಿಕೊಂಡಿಲ್ಲ. ಈ ಬಾರಿ ಒಂದು ರಾಜಕೀಯ ಪಕ್ಷದ ಚಿಹ್ನೆಯಡಿ ನಾನು ಸ್ಪರ್ಧಿಸುತ್ತಿದ್ದೇನೆ. ಈ ವಿಚಾರದಲ್ಲಿ ಪಕ್ಷ, ಪಕ್ಷದ ನಾಯಕರು ಏನು ಹೇಳುತ್ತಾರೆ ನೋಡಬೇಕು. ಈ ಬಾರಿ ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ. ಪ್ರಚಾರ, ಹೋರಾಟ, ಕ್ಯಾಂಪೇನ್ ಎಲ್ಲವೂ ವಿಭಿನ್ನವಾಗಿರಲಿದೆ ಎಂದು ಹೇಳಿದರು.
ಯಶ್, ದರ್ಶನ್ ಪ್ರಚಾರಕ್ಕೆ ಬಂದರೆ ಬಲ ಇರುತ್ತೆ, ಎಲ್ಲರೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಕಳೆದ ಚುನಾವಣೆ ಸಮಯದಲ್ಲಿ ಸ್ವಾರ್ಥ ಇಲ್ಲದೆ ನನ್ನ ಪರ ನಿಂತಿದ್ದರು. ಪದೇ ಪದೇ ಎಲ್ಲಾ ಬಿಟ್ಟು ಪ್ರಚಾರಕ್ಕೆ ಬನ್ನಿ ಎಂದು ಕರೆಯೋದು ಸರಿಯಲ್ಲ. ಅದಕ್ಕೆ ನನ್ನ ಮನಸ್ಸೂ ಒಪ್ಪುವುದಿಲ್ಲ. ಯಶ್, ದರ್ಶನ್ ಒಂದೊಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅದನ್ನೆಲ್ಲ ಬಿಟ್ಟು ನನ್ನ ಪರ ಪ್ರಚಾರಕ್ಕೆ ಬನ್ನಿ ಎಂದು ಕರೆಯೋದು ಸರಿಯಲ್ಲ. ಅವರೇ ಪ್ರಚಾರಕ್ಕೆ ಬರೋದಾದರೆ ಖಂಡಿತವಾಗಿಯೂ ಸ್ವಾಗತಿಸುತ್ತೇನೆ. ದೊಡ್ಡ ಶಕ್ತಿಯಾಗಿ ಅವರ ಬೆಂಬಲ ನನಗೆ ಇರುತ್ತೆ ಎಂದರು.
ಯಶ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸೋಲ್ಲ ಎಂಬ ವಿಚಾರದ ಬಗ್ಗೆ ಕೇಳಿದಾಗ, ರಾಜಕಾರಣ ಗಲೀಜು ಎಂದು ಹೇಳಿದ್ದಾರೆ. ಟೀಕೆ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಈಗ ದೇಶ ಮಟ್ಟದಲ್ಲಿ ಸ್ಟಾರ್. ಪ್ರಚಾರಕ್ಕೆ ಬರಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಅವರಾಗಿಯೇ ಬರುವುದಾದರೆ ಸಂತೋಷಪಡುತ್ತೇನೆ. ದರ್ಶನ್ ಮತ್ತು ಯಶ್ ನನ್ನ ಮನೆಯ ಮಕ್ಕಳಿದ್ದಂತೆ. ಅವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಅವರು ಪ್ರಚಾರಕ್ಕೆ ಬರಲಿಲ್ಲವೆಂದರೂ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ಪಕ್ಷದ ಚಿಹ್ನೆಯಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷದ ಹೈಕಮಾಂಡ್ ಏನು ಹೇಳುತ್ತಾರೋ ನೋಡಬೇಕು. ಇದು ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ. ಪ್ರಚಾರ, ಹೋರಾಟ, ಕ್ಯಾಂಪೇನ್ ಎಲ್ಲವೂ ಡಿಫರೆಂಟ್ ಆಗಿರುತ್ತದೆ ಎಂದರು.
ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿರುವುದು ಪ್ರಚಾರ ಆರಂಭಿಸಲು ಎಂದು ಹೋಗಿಲ್ಲ. ನಾಗಮಂಗಲದಲ್ಲಿ ಇಂದು ನನಗೆ ಒಂದಷ್ಟು ಕಾರ್ಯಕ್ರಮ ಇತ್ತು. ಕಳೆದ ಬಾರಿ ಚುನಾವಣೆಗೂ ಮೊದಲೇ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ. ಒಳ್ಳೆಯದಾಗಿತ್ತು. ಶುಭವಾಗಿತ್ತು. ಹಾಗಾಗಿ ನಂಬಿಕೆ ವಿಶ್ವಾಸ ಇದೆ ಎಂದು ತಿಳಿಸಿದರು.
ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ನಡೆದಿರುವ ಬಾಂಬ್ ಬ್ಲಾಸ್ಟ್ ಭಯಾನಕ ವಿಚಾರ. ಎಲ್ಲರೂ ಸೇರಿ ಖಂಡಿಸಬೇಕು. ಯಾರೂ ಸಮರ್ಥನೆ ಮಾಡುವ ಕೆಲಸ ಮಾಡಬಾರದು. ಅವರಿಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡಿಸಬೇಕು. ಎಲ್ಲರೂ ಒಂದೇ ದಾರಿಯಲ್ಲಿ ಹೋಗಬೇಕು. ಬೇರೆ ಬೇರೆ ಹೇಳಿಕೆ ಕೊಡುವುದು ಅವರ ಪರವಾದ ರೀತಿಯಲ್ಲಿ ಹೇಳಿಕೆ ಕೊಡುವುದು ಮಹಾಪರಾಧ ಎಂದರು.
ಮಂಗಳೂರು ಕುಕ್ಕರ್ ಬ್ಲಾಸ್ ರೀತಿಯಲ್ಲೇ ಇದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಅವರನ್ನು ಬೇಗ ಬಂಧಿಸುವ ವಿಶ್ವಾಸ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕಿಂತ ಹೆಚ್ಚಾಗಿ ಉಗ್ರವಾದಿ ಅಥವಾ ಆಂತಕವಾದಿಗಳು ಈ ರೀತಿಯ ಕೃತ್ಯಗಳನ್ನು ಮಾಡಬಹುದು ಎಂಬಂತಹ ಅನುಮಾನಗಳು ಹೆಚ್ಚಾಗಿವೆ ಎಂದರು.
ಮಂಡ್ಯದಲ್ಲಿ ನನ್ನ ಬಾಡಿಗೆ ಮನೆ ಇದೆ. ಅಂಬರೀಶ್ ಇವರು ಇದ್ದಾಗಲೂ ಸಹ ಅದೇ ಮನೆಯಲ್ಲಿ ಇದ್ದರು. ಈಗಲೂ ನಾನು ಅಲ್ಲೇ ಇದ್ದೇನೆ. ಹನಕೆರೆ ಬಳಿ ನಿವೇಶನ ಪಡೆದು ಪೂಜೆ ಮಾಡಿ ಮನೆ ಕಟ್ಟುವ ಆಸೆ ಇತ್ತು. ಆದರೆ ಇದರಲ್ಲಿ ರಾಜಕಾರಣ ನಡೆಯಿತು. ಮನೆ ಕಟ್ಟುವಾಗ ಅಡಚಣೆ, ತೊಂದರೆ ನೀಡಿದರು. ಇದರಿಂದ ಸ್ವಲ್ಪ ಸಮಸ್ಯೆಯಾಗಿದೆ. ನನಗಿಂತಲೂ ಅಭಿಗೆ ಮಂಡ್ಯದಲ್ಲಿ ಮನೆ ಕಟ್ಟಬೇಕು ಎಂಬ ತುಂಬಾ ಆಸೆ ಇದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ