ಹಾವೇರಿ:
ನಿರಂತರ ಮಳೆ ಹಿನ್ನೆಲೆ ಮನೆಯ ಮೇಲ್ಚಾವಣಿ ಕುಸಿದು ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಮನೆ ಸೋರುತ್ತಿದ್ದು, ಇಂದು ಬೆಳಗ್ಗೆ ಗೋಡೆ ಕುಸಿದಿದೆ. ಮೃತ ಚೆನ್ನಮ್ಮ ಹರಕುಣಿ (30),ಆಕೆಯ ಅವಳಿ ಹೆಣ್ಣು ಮಕ್ಕಳಾದ ಅಮೂಲ್ಯ ಮತ್ತು ಅನನ್ಯಾ (2) ಒಂದೇ ಕೋಣೆಯಲ್ಲಿ ಮಲಗಿದ್ದರು. ಅವರ ತಾಯಿ ಯಲ್ಲಮ್ಮ (70) ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿರುವ ಮುತ್ತಣ್ಣ ಹರಕುಣಿ (70) ಮತ್ತು ಸುನೀತಾ (35) ಅವರನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬ ಮಾದಾಪುರ ಗ್ರಾಮದಲ್ಲಿ ಸಣ್ಣ ಹಿಡುವಳಿ ಭೂಮಿ ಹೊಂದಿದೆ.
ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಆಘಾತ ವ್ಯಕ್ತಪಡಿಸಿದ್ದು, ಇಂದು ಹಾವೇರಿಯಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ ಅವರು, ಗಾಯಗೊಂಡ ಕುಟುಂಬದ ಸದಸ್ಯರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಆಗ್ರಹಿಸಿದ್ದಾರೆ.
ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಹಾಗೂ ಆಡಳಿತದ ಹಿರಿಯ ಅಧಿಕಾರಿಗಳು ಇಂದು ಮಾದಾಪುರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಹರಕುಣಿ ಕುಟುಂಬದ ಸದಸ್ಯರಿಗೆ ಗ್ರಾಮದಲ್ಲೇ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಂದಿದ್ದರೆ ಗಾಯಾಳುಗಳನ್ನು ರಕ್ಷಿಸಬಹುದಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ಆಂಬುಲೆನ್ಸ್ ಸಕಾಲಕ್ಕೆ ಸ್ಪಂದಿಸಲಿಲ್ಲ. ಈ ಬಗ್ಗೆ ಡಿಸಿಗೆ ದೂರು ನೀಡಲಾಗಿದೆ. ಹೊರತೆಗೆಯುವಾಗ ಶಿಶುಗಳು ಜೀವಂತವಾಗಿದ್ದವು. ಆದರೆ. ಸಕಾಲಕ್ಕೆ ಆಂಬ್ಯುಲೆನ್ಸ್ ಬರಲಿಲ್ಲ’ ಎಂದು ಗ್ರಾಮಸ್ಥರು ಹೇಳಿದರು.
