
ಮಂಗಳೂರು: ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಬಳಿಕ ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ ಸಿ-2(ಪೋಕ್ಸೋ) ಅಪರಾಧಿಗೆ ದಂಡ ಸಹಿತ 20 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಮುನ್ನೂರು ಮೂಲದವನಾದ ಕಾವೂರು ಬಾಡಿಗೆ ಮನೆ ನಿವಾಸಿ ಮಹೇಶ ಮಾದರ (20) ಶಿಕ್ಷಗೊಳಗಾದವ.
ಪ್ರಕರಣದ ವಿವರ: ಸಂತ್ರಸ್ತ 15 ವರ್ಷದ ಬಾಲಕಿ ಮೂಲತಃ ಹೊರ ಜಿಲ್ಲೆಯವಳಾಗಿದ್ದು ತಂದೆ, ತಾಯಿಯೊಂದಿಗೆ ನಗರದ ಹೊರವಲಯದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಮಹೇಶ ಮಾದರ ಕೂಲಿ ಕೆಲಸ ಮಾಡುತ್ತಿದ್ದ. ಯುವಕ ಹಾಗೂ ಬಾಲಕಿ ಇಬ್ಬರೂ ಪರಿಚಯವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದು ಹೆತ್ತವರು ಆಕೆಗೆ ಬುದ್ದಿಮಾತು ಹೇಳಿದ್ದು, ಆತನ ಸಂಪರ್ಕದಿಂದ ದೂರ ಮಾಡಿ, ಆಕೆ ಮಾಡುತ್ತಿದ್ದ ಮನೆ ಕೆಲಸದಿಂದ ಬಿಡಿಸಿದ್ದರು. ಆದರೆ, ತಾನು ಕೆಲಸಕ್ಕೆ ಹೋಗಬೇಕು ಎಂದು ಹಠ ಮಾಡಿ, ಬಾಲಕಿ 2015ರ ಮೇ 14ರಂದು ಮತ್ತೆ ಬೇರೊಂದು ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.
ಕೊಲೆ ಬೆದರಿಕೆ ಹಾಕಿದ್ದ ಆರೋಪಿ: 2015ರ ಮೇ 19ರಂದು ಮನೆಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದ ವೇಳೆ ಕರೆ ಮಾಡಿದ ಮಹೇಶ, ನೀನು ಕೂಡಲೇ ಹೊರಟು ಬಾ, ನಾವಿಬ್ಬರೂ ಬೇರೆ ಕಡೆ ಹೋಗೋಣ. ಬಾರದೇ ಇದ್ದರೆ, ನಿನ್ನ ತಂದೆ-ತಾಯಿಯನ್ನು ಕೊಂದು ತಾನೂ ಸಾಯುವುದಾಗಿ ಬೆದರಿಕೆ ಹಾಕಿದ್ದ.
ಬಳ್ಳಾರಿಗೆ ತೆರಳಿದ್ದರು: ಯುವಕನ ಬೆದರಿಕೆಗೆ ಮಣಿದ ಬಾಲಕಿ ಬಲ್ಲಾಳ್ ಬಾಗ್ಗೆ ಬಂದಿದ್ದು, ಅಲ್ಲಿಂದ ಆಟೋದಲ್ಲಿ ಕಾವೂರು ಬಳಿಯ ಶೆಡ್ಗೆ ಕರೆದುಕೊಂಡು ಹೋಗಿದ್ದ. ಇಬ್ಬರೂ ಅಲ್ಲಿ ಉಳಿದುಕೊಂಡಿದ್ದು, ಅಂದು ರಾತ್ರಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಮೇ 20ರಂದು ಬೆಳಗ್ಗೆ 11 ಗಂಟೆಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಬಳ್ಳಾರಿ ನಗರಕ್ಕೆ ಹೋಗಿ, ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿದ್ದರು. ಆದರೆ ಸಿಗದಿದ್ದಾಗ, ನಾಗಲಕೇರೆ ಎಂಬಲ್ಲಿ ಜನವಸತಿ ಇಲ್ಲದ ಪಾಳುಬಿದ್ದ ಮನೆಯಲ್ಲಿ ಇಬ್ಬರೂ ಉಳಿಸಿಕೊಂಡಿದ್ದರು. ಮೇ 22ರಂದು ಅಲ್ಲಿಯೂ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಬಾಲಕಿ ದೂರು ನೀಡಿದ್ದಳು.
ನಾಪತ್ತೆ ಪ್ರಕರಣ ದಾಖಲು: ಇತ್ತ, ಕೆಲಸ ಮಾಡುತ್ತಿದ್ದ ಮನೆಯಿಂದ ಬಾಲಕಿ ನಾಪತ್ತೆಯಾದ ಬಗ್ಗೆ ಮನೆಯವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಬಾಲಕಿಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಬಿಎನ್ಎಸ್ ಕಲಂ 137(2), 65(1) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮ 2012 (ಪೋಕ್ಸೋ) ಕಲಂ 52 ಮತ್ತು 6ರಡಿ ಮಹೇಶ ಮಾದರನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ ಸಿ-2(ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಸಮಗ್ರ ವಿಚಾರಣೆ ನಡೆಸಿ, ಮಹೇಶನ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಭರಿಸಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳ ಸಾದಾ ಸಜೆ ಅನುಭವಿಸಬೇಕು. ಬಾಲಕಿಯ ಅಪಹರಣ ಮಾಡಿರುವ ಅಪರಾಧಕ್ಕೆ 3 ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಅನುಭವಿಸಬೇಕು. ದಂಡದ ಮೊತ್ತ 35 ಸಾವಿರ ರೂ.ಗಳನ್ನು ಸಂತ್ರಸ್ತೆಗೆ ನೀಡಬೇಕು. ಜೊತೆಗೆ ಸಂತ್ರಸ್ತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರವಾಗಿ 3.65 ಲಕ್ಷ ರೂ. ನೀಡಬೇಕು ಎಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಕಾವೂರು ಠಾಣೆಯ ಅಂದಿನ ಪಿಎಸ್ಐ ರೇಖಾ ಆರ್. ಆರಂಭಿಕ ತನಿಖೆ ನಡೆಸಿದ್ದು, ಬಳಿಕ ಪೊಲೀಸ್ ನಿರೀಕ್ಷಕ ಗುರುರಾಜ್ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದ ಮಂಡಿಸಿದ್ದರು.








