ನಾಳೆ ದೆಹಲಿಯಲ್ಲಿ ಮನಮೋಹನ್ ಸಿಂಗ್ ಅಂತ್ಯಸಂಸ್ಕಾರ : ಕಾಂಗ್ರೆಸ್

ನವದೆಹಲಿ

    ದೀರ್ಘಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗುರುವಾರ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶನಿವಾರ ದೆಹಲಿ ರಾಜ್‌ಘಾಟ್ ಬಳಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ.

   ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ರಾತ್ರಿ ಡಾ. ಸಿಂಗ್ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಬೆಳಗಾವಿಯಲ್ಲಿ ‘ಗಾಂಧಿ ಭಾರತ’ ಕಾಂಗ್ರೆಸ್ ಅಧಿವೇಶನದಲ್ಲಿದ್ದ ಇಬ್ಬರೂ ನಾಯಕರು ಮನಮೋಹನ್ ನಿಧನದ ಸುದ್ದಿ ತಿಳಿದ ತಕ್ಷಣ ದೆಹಲಿಗೆ ತೆರಳಿದ್ದರು.
   ಮನಮೋಹನ್ ಅವರ ಮಗಳು ವಿದೇಶದಿಂದ ಬರಬೇಕಿದ್ದು, ಇಂದು ಮಧ್ಯಾಹ್ನ ಅಥವಾ ಸಂಜೆ ದೆಹಲಿ ತಲುಪಬಹುದು. ಆ ನಂತರವೇ ಎಲ್ಲದರ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ‘ಎಎನ್​ಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
   2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್, ಅನಾರೋಗ್ಯದಿಂದಾಗಿ ಗುರುವಾರ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಉಸಿರಾಟದ ತೊಂದರೆ ಇತ್ತು. ನಿಧನದ ಹಿನ್ನೆಲೆಯಲ್ಲಿ ದೇಶದಲ್ಲಿ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಮೆರಿಕ ಸರ್ಕಾರ ಗೌರವ ಸಲ್ಲಿಸಿದೆ. ಮನಮೋಹನ್ ಸಿಂಗ್ ಅವರು ಆರ್ಥಿಕ ಸುಧಾರಣೆಗಳಿಗಾಗಿ ನೆನಪಿಸಿಕೊಳ್ಳುತ್ತಾರೆ ಎಂದು ಅಮೆರಿಕ ಹೇಳಿದೆ. ಅವರು ಭಾರತದ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಿದರು. ಅವರು ಅಮೆರಿಕ-ಭಾರತದ ಕಾರ್ಯತಂತ್ರದ ಪಾಲುದಾರಿಕೆಯ ಬೆಂಬಲಿಗರಾಗಿದ್ದರು ಎಂದು ನುಡಿ ನಮನದಲ್ಲಿ ಅಮೆರಿಕ ಸರ್ಕಾರ ಉಲ್ಲೇಖಿಸಿದೆ.
  ಇಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.

Recent Articles

spot_img

Related Stories

Share via
Copy link