ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌

ನವೆದಹಲಿ: 

    ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್  ಅವರ ಸ್ಮಾರಕಕ್ಕೆ ಜಾಗವನ್ನು ನೀಡಲು ಕೇಂದ್ರ ಸರ್ಕಾರ  ನಿರ್ಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ  ತಿಳಿಸಿದೆ. ಈ ಬಗ್ಗೆ ಅವರ ಕುಟುಂಬ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ  ಅವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ  ಅವರನ್ನು ಒತ್ತಾಯಿಸಿದ್ದರು.

   ಎರಡು ಅವಧಿಗೆ ದೇಶದ ಪ್ರಧಾನಿಯಾಗಿದ್ದ ಸಿಂಗ್ ಅವರ ಸ್ಮಾರಕ ಸ್ಥಾಪಿಸುವ ಕುರಿತು ಮೋದಿ ಮಾತನಾಡಿದ ಬಳಿಕ ಅವರಿಗೆ ಪತ್ರ ಬರೆದಿರುವ ಖರ್ಗೆ, ಡಿ 28 ರಂದು ಮನಮೋಹನ್ ಸಿಂಗ್ ಅಂತ್ಯಸಂಸ್ಕಾರ ನಡೆಯಲಿರುವ ಸ್ಥಳ ದೇಶದ ಹೆಮ್ಮೆಯ ಪುತ್ರನ ಸ್ಮಾರಕದ ಪವಿತ್ರ ಸ್ಥಳವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

   ರಾಷ್ಟ್ರನಾಯಕರು ಮತ್ತು ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸುವ ಸಂಪ್ರದಾಯವಿದೆ. ಅದರಂತೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿಯೇ ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರ ನಡೆಯಬೇಕು ಎಂದು ಖರ್ಗೆ ಮನವಿ ಮಾಡಿದ್ದರು. ಕ್ಯಾಬಿನೆಟ್‌ ಸಭೆಯ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖರ್ಗೆ ಮತ್ತು ಮನಮೋಹನ್ ಸಿಂಗ್ ಅವರ ಕುಟುಂಬಕ್ಕೆ ಸರ್ಕಾರವು ಸ್ಮಾರಕಕ್ಕಾಗಿ ಜಾಗವನ್ನು ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
   ದೇಶದ ಮೊದಲ ಸಿಖ್ ಪ್ರಧಾನಿಯನ್ನು ಉದ್ದೇಶಪೂರ್ವಕವಾಗಿ ಸರ್ಕಾರ ಅವಮಾನಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. “ಅವರ ಜಾಗತಿಕ ಸ್ಥಾನಮಾನ, ಅತ್ಯುತ್ತಮ ಸಾಧನೆಗಳ ದಾಖಲೆ ಮತ್ತು ದಶಕಗಳಿಂದ ದೇಶಕ್ಕೆ ಅನುಕರಣೀಯ ಸೇವೆಗೆ ಸೂಕ್ತವಾದ ಅವರ ಅಂತ್ಯಕ್ರಿಯೆ ಮತ್ತು ಸ್ಮಾರಕಕ್ಕೆ ಭಾರತ ಸರ್ಕಾರವು ಏಕೆ ಸ್ಥಳವನ್ನು ಗುರುತು ಮಾಡಲಿಲ್ಲ ಎಂಬುದನ್ನು ನಮ್ಮ ದೇಶದ ಜನರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಭಾರತದ ಮೊದಲ ಸಿಖ್ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಉದ್ದೇಶಪೂರ್ವಕ ಅವಮಾನವಲ್ಲದೆ ಬೇರೇನೂ ಅಲ್ಲ’ ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಕಿಡಿ ಕಾರಿದ್ದಾರೆ.

Recent Articles

spot_img

Related Stories

Share via
Copy link