ಬೆಂಗಳೂರು:
ದೊಡ್ಡಕಲ್ಲಸಂದ್ರ ರಸ್ತೆಯಲ್ಲಿರುವ ಮಂತ್ರಿ ಸೆರಿನಿಟಿ ಅಪಾರ್ಟ್‌ಮೆಂಟ್‌ನಲ್ಲಿರುವ 106 ಫ್ಲಾಟ್ ಮಾಲೀಕರು ವಿದ್ಯುತ್ ಕಡಿತದಿಂದ ತೀವ್ರ ತೊಂದರೆ ಎದುರಿಸುತ್ತಿದ್ದು ಮಂತ್ರಿ ಗ್ರೂಪ್‌ನ ಘಟಕವಾದ ವಿಸ್ಟಾ ಕ್ಯಾಸಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶನಿವಾರ ಮಧ್ಯಾಹ್ನ ಬೆಸ್ಕಾಂನಿಂದ ತಾತ್ಕಾಲಿಕವಾಗಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ಮತ್ತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ಬೆಸ್ಕಾಂನ ಷರತ್ತಿನೊಂದಿಗೆ ಮತ್ತೆ ವಿದ್ಯುತ್ ಪೂರೈಸಲಾಗಿದೆ.
27 ಅಂತಸ್ತಿನ ಅಪಾರ್ಟ್‌ಮೆಂಟ್ ಸಂಕೀರ್ಣದ 17 ಬ್ಲಾಕ್‌ಗಳಲ್ಲಿ 1,500 ಕುಟುಂಬಗಳಿವೆ. ಇವರು ಸುಮಾರು ಎರಡು ವರ್ಷಗಳಿಂದ ತಾತ್ಕಾಲಿಕ ವಿದ್ಯುತ್ ಪೂರೈಕೆ ಸ್ಥಗಿತ ಸಮಸ್ಯೆಯಿಂದ ಹೋರಾಡುತ್ತಿದೆ. ಮಾಲೀಕರ ಪರವಾಗಿ ಮಾತನಾಡಿದ ಆರ್.ರಾಮಾನುಜಂ, ಬಾಧಿತ ಎಲ್ಲಾ ಫ್ಲಾಟ್ ಮಾಲೀಕರು ಮತ್ತು ಸಂಘದ ಇಬ್ಬರು ಸದಸ್ಯರು ದೂರಿಗೆ ಸಹಿ ಮಾಡಿದ್ದಾರೆ. ನಾವು ಸುಮಾರು ಎರಡು ವರ್ಷಗಳ ಹಿಂದೆ ಫ್ಲಾಟ್‌ಗಳಿಗೆ ಸ್ಥಳಾಂತರಗೊಂಡಾಗ, ನಮಗೆ ಶಾಶ್ವತ ವಿದ್ಯುತ್ ಪೂರೈಕೆಯ ಭರವಸೆ ನೀಡಲಾಗಿತ್ತು. ಆದರೆ ತಾತ್ಕಾಲಿಕವಾಗಿ ಮಾತ್ರ ವಿದ್ಯುತ್ ಪಡೆಯುತ್ತಿದ್ದೇವೆ.
ಡೆವಲಪರ್ ವಿದ್ಯುತ್ ಬಿಲ್ ಪಾವತಿಸಿದ್ದರೂ, ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಬೆಸ್ಕಾಂ ಪದೇ ಪದೇ ನೋಟಿಸ್ ನೀಡುತ್ತಿದೆ. ಶನಿವಾರ, 17 ಬ್ಲಾಕ್‌ಗಳು ಕತ್ತಲೆಯಲ್ಲಿ ಮುಳುಗಿದವು. ನಾಲ್ಕು ಬ್ಲಾಕ್‌ಗಳು ಬಾಧಿತವಾಗಿಲ್ಲ. ಜುಲೈ 19 ರಂದು ಮಧ್ಯಾಹ್ನ 2 ಗಂಟೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬೆಸ್ಕಾಂ ಮತ್ತೆ ಸಂಜೆ 6:30 ರ ಹೊತ್ತಿಗೆ ಅದನ್ನು ಪುನಃಸ್ಥಾಪಿಸಲಾಯಿತು. 60 ಗಂಟೆಗಳಲ್ಲಿ ಮತ್ತೆ ಸಂಪರ್ಕ ಕಡಿತಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ನಾವು ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ವಿಸ್ಟಾ, ಪ್ರಾಪ್‌ಕೇರ್ ರಿಯಲ್ ಎಸ್ಟೇಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನಿಂದ ಹೊರಗುತ್ತಿಗೆ ಪಡೆದ ಏಜೆನ್ಸಿ ಬೆಸ್ಕಾಂಗೆ ನಿಯಮಿತವಾಗಿ ವಿದ್ಯುತ್ ಬಿಲ್‌ಗಳನ್ನು ಪಾವತಿಸುತ್ತಿದೆ. ಆದ್ದರಿಂದ ಬಾಕಿ ಬಿಲ್‌ಗಳು ಸಮಸ್ಯೆಯಾಗಿಲ್ಲ ಎಂದ ರಾಮಾನುಜಂ, ತಾತ್ಕಾಲಿಕ ವಿದ್ಯುತ್ ಪೂರೈಕೆಯಿಂದ ತುಂಬಾ ತೊಂದರೆಯಾಗುತ್ತಿದೆ. ಇದು ಸಾಕಷ್ಟು ಅನಿಯಮಿತವಾಗಿದೆ. ಲಿಫ್ಟ್‌ಗಳಲ್ಲಿ ಹಿರಿಯ ನಾಗರಿಕರು 30 ರಿಂದ 45 ನಿಮಿಷಗಳ ಕಾಲ ಸಿಲುಕಿಕೊಂಡು ಅವರ ಜೀವಕ್ಕೆ ಅಪಾಯವನ್ನುಂಟುಮಾಡುವ ನಿದರ್ಶನಗಳಿವೆ. ನಿರಂತರ ಭಯದಲ್ಲಿ ಬದುಕುತ್ತಿದ್ದು,ತುರ್ತಾಗಿ ಪರಿಹಾರದ ಅಗತ್ಯವಿದೆ ಎಂದರು.
ಈ ಸಮಸ್ಯೆಯ ಕುರಿತು ಪ್ರತಿಕ್ರಿಯೆಗಾಗಿ ಮಂತ್ರಿ ಸಮೂಹದ ಮಾಲೀಕರು ಮತ್ತು ಪ್ರತಿನಿಧಿಗಳನ್ನು ಸಂಪರ್ಕಿಸುವ ಪ್ರಯತ್ನಗಳು ವಿಫಲವಾಗಿವೆ. ತುರ್ತುಪರಿಸ್ಥಿತಿಯ ಕಾರಣದಿಂದ ಪ್ರತಿನಿಧಿಯೊಂದಿಗಿನ ನಿಗದಿತ ಅಪಾಯಿಂಟ್‌ಮೆಂಟ್ ಅನ್ನು ರದ್ದುಗೊಳಿಸಲಾಯಿತು. ತದನಂತರ ಸಭೆ ನಡೆಸುವ ಪ್ರಯತ್ನಕ್ಕೂ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ರೋಸಿ ಹೋದ ಫ್ಲಾಟ್ ಮಾಲೀಕರು ಆವರಣದಲ್ಲಿರುವ ಮಂತ್ರಿ ಸೆರಿನಿಟಿಯ ಮಾರ್ಕೆಟಿಂಗ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಸಂಜೆಯವರೆಗೂ ಮುಚ್ಚಿಸಿದ್ದರು. ಈ ಕಚೇರಿ ಸಾರ್ವಜನಿಕರಿಗೆ ಫ್ಲಾಟ್ ಮಾರಾಟದಲ್ಲಿ ಸಕ್ರಿಯವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ