ಜಾಲ್ನಾ:
ಮರಾಠರಿಗೆ ಒಬಿಸಿ ಕೋಟಾದಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜನವರಿ 25, 2025 ರಂದು ಅನಿರ್ದಿಷ್ಟ ಉಪವಾಸ ಆರಂಭಿಸುವುದಾಗಿ ಹೋರಾಟಗಾರ ಮನೋಜ್ ಜಾರಂಗೆ ಅವರು ಮಂಗಳವಾರ ಘೋಷಿಸಿದ್ದಾರೆ.
ಇಂದು ಮಹಾರಾಷ್ಟ್ರದ ಜಾಲ್ನಾದ ಅಂತರವಾಳಿ ಸಾರ್ತಿ ಗ್ರಾಮದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಜಾರಂಗೆ, ಮರಾಠಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸುವಂತೆ ಮನವಿ ಮಾಡಿದರು.
ಯಾರೂ ಮನೆಯಲ್ಲಿ ಇರಬೇಡಿ. ಎಲ್ಲರೂ ಅಂತವಾಳಿ ಸಾರ್ತಿಗೆ ಬನ್ನಿ, ನಮ್ಮ ಶಕ್ತಿ ತೋರಿಸೋಣ ಎಂದು ಕರೆ ನೀಡಿದರು. ಆದಾಗ್ಯೂ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಜಾರಂಗೆ, ‘ಸರ್ಕಾರ ನಮಗೆ ಮೋಸ ಮಾಡಿದೆ. ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ಅವರನ್ನು ಬಿಡುವುದಿಲ್ಲ’ ಎಂದರು.
42 ವರ್ಷದ ಮನೋಜ್ ಜಾರಂಗೆ ಅವರು 2023ರ ಆಗಸ್ಟ್ 9 ರಿಂದ ಮರಾಠಾ ಮೀಸಲಾತಿಯ ವಿಷಯವಾಗಿ ಪದೇ ಪದೇ ಉಪವಾಸ ಸತ್ಯಾಗ್ರಹಗಳನ್ನು ನಡೆಸುತ್ತಿದ್ದಾರೆ. ಇದು ಜಾರಂಗೆ ಅವರ ಆರನೇ ಉಪವಾಸ ಸತ್ಯಾಗ್ರಹವಾಗಿದೆ. ಮೊದಲು 17 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು.
ಕಳೆದ ಒಂದು ವರ್ಷದಲ್ಲಿ ಆರು ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿರುವ ಜಾರಂಗೆ ಅವರು, ಈ ಉಪವಾಸ ಸ್ವಯಂಪ್ರೇರಿತವಾಗಿರುತ್ತದೆ ಮತ್ತು ಮರಾಠ ಸಮುದಾಯದ ಯಾವುದೇ ಸದಸ್ಯರು ಭಾಗವಹಿಸಬಹುದು ಎಂದು ಒತ್ತಿ ಹೇಳಿದರು.