ನವದೆಹಲಿ:
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಹದಗೆಟ್ಟಿದ್ದ ಭಾರತ ಮತ್ತು ಕೆನಡಾ ಸಂಬಂಧ ಸುಧಾರಣೆಯ ಲಕ್ಷಣಗಳು ಕಾಣುತ್ತಿವೆ. ಕೆನಡಾ ಫೆಡರಲ್ ಚುನಾವಣೆಯಲ್ಲಿ ಮಾರ್ಕ್ ಕಾರ್ನಿ ನೇತೃತ್ವದ ಲಿಬರಲ್ ಪಕ್ಷದ ಗೆಲುವು ಹದಗೆಟ್ಟಿರುವ ಅಂತಾರಾಷ್ಟ್ರೀಯ ಸಂಬಂಧವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ರಾಜಕೀಯಕ್ಕೆ ಹೊಸಬರಾಗಿರುವ ಕಾರ್ನಿ ಅವರು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಬಿರುಕು ಮೂಡುತ್ತಿರುವ ಈ ಸಂದರ್ಭದಲ್ಲಿ ನಾನು ಹೆಚ್ಚು ಉಪಯುಕ್ತ ಎಂದು ಹೇಳಿರುವುದು ಕೂಡ ಭಾರತದೊಂದಿಗೆ ಕೆನಡಾ ಮತ್ತೆ ತನ್ನ ಸಂಬಂಧವನ್ನು ಸುಧಾರಿಸಬಹುದು ಎನ್ನುವ ವಿಶ್ವಾಸ ಉಂಟುಮಾಡಿದೆ.
ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಅಧಿಕಾರಾವಧಿಯಲ್ಲಿ ನವದೆಹಲಿ ಮತ್ತು ಒಟ್ಟಾವಾ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿಸಾಕಷ್ಟು ಬಿರುಕು ಮೂಡಿತ್ತು. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಕಾರ್ನಿ ತಮ್ಮ ಚುನಾವಣಾ ಪ್ರಚಾರದಲ್ಲಿ ಭಾರತದೊಂದಿಗೆ ಕೆನಡಾ ಸಂಬಂಧವನ್ನು ಪುನರ್ನಿರ್ಮಿಸುವುದು ಒಂದು ಆದ್ಯತೆಯಾಗಿದೆ ಎಂದು ಹೇಳಿದ್ದರು. ಸಮಾನ ಮನಸ್ಕ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ವೃದ್ಧಿಸುವ ಗುರಿ ಹೊಂದಿರುವ ಕೆನಡಾಕ್ಕೆ ಭಾರತದೊಂದಿಗಿನ ಸಂಬಂಧವನ್ನು ಪುನರ್ನಿರ್ಮಿಸಲು ಅವಕಾಶಗಳಿವೆ. ವಾಣಿಜ್ಯ ಸಂಬಂಧದ ಸುತ್ತ ಮೌಲ್ಯಗಳ ಹಂಚಿಕೆಯ ಪ್ರಜ್ಞೆ ಇರಬೇಕು. ನಾನು ಪ್ರಧಾನಿಯಾಗಿದ್ದರೆ ಅದನ್ನು ನಿರ್ಮಿಸುವ ಅವಕಾಶಕ್ಕಾಗಿ ಎದುರು ನೋಡುತ್ತೇನೆ ಎಂದು ಕಾರ್ನಿ ಹೇಳಿದ್ದರು.
ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದ ಹೊರಗೆ 2023ರ ಜೂನ್‌ನಲ್ಲಿ ಕೆನಡಾದ ಪ್ರಜೆ ಮತ್ತು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ “ಭಾರತೀಯ ಏಜೆಂಟರು” ಭಾಗಿಯಾಗಿದ್ದಾರೆ ಎಂದು ಟ್ರೂಡೊ ಸರ್ಕಾರ ಆರೋಪಿಸಿತ್ತು. ಬಳಿಕ ಭಾರತ- ಕೆನಡಾ ಸಂಬಂಧದಲ್ಲಿ ಬಿರುಕು ಮೂಡಲು ಪ್ರಾರಂಭವಾಯಿತು.
2024ರ ಅಕ್ಟೋಬರ್‌ನಲ್ಲಿ ಕೆನಡಾ ಆರು ಭಾರತೀಯ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿದಾಗ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ನಿಜರ್ ಹತ್ಯೆಯಲ್ಲಿ ಭಾರತದ ಅಧಿಕಾರಿಗಳ ಪಾತ್ರವನ್ನು ಭಾರತ ನಿರಾಕರಿಸಿದ್ದು, ಈ ಆರೋಪ ಆಧಾರರಹಿತವೆಂದು ಖಂಡಿಸಿತು. ಇದರ ಪರಿಣಾಮ ಎರಡೂ ರಾಷ್ಟ್ರಗಳು ಉನ್ನತ ರಾಯಭಾರಿಗಳನ್ನು ದೇಶದಿಂದ ಹೊರಹಾಕಿ ವ್ಯಾಪಾರ ಮಾತುಕತೆ, ಅಧಿಕೃತ ಭೇಟಿಗಳನ್ನು ಸ್ಥಗಿತಗೊಳಿಸಲಾಯಿತು. ಆದರೆ ಇದೀಗ ಕಾರ್ನಿಯ ವಿಜಯ ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಹೊಸ ಬೆಳವಣಿಗೆಯಾಗುವ ಭರವಸೆ ಮೂಡಿಸಿದೆ.
ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ನ ಮುಖ್ಯಸ್ಥರಾಗಿರುವ 60 ವರ್ಷದ ಮಾರ್ಕ್ ಕಾರ್ನಿ ಅವರು ರಾಷ್ಟ್ರೀಯ ಸಾರ್ವಭೌಮತ್ವಕ್ಕಾಗಿ ಕೆನಡಾದ ವಿದೇಶಿ ಮೈತ್ರಿಗಳನ್ನು ಪುನರ್ ಜೀವಗೊಳಿಸಲು ಕರೆ ನೀಡುವಂತೆ ಮಾಡಿದೆ. ವ್ಯಾಪಾರ ಪಾಲುದಾರ ಅಮೆರಿಕದಿಂದ ಸುಂಕದ ಬೆದರಿಕೆಯಲ್ಲಿರುವ ಕೆನಡಾಕ್ಕೆ ಇದು ಅತ್ಯಗತ್ಯವಾಗಿತ್ತು. ಕಾರ್ನಿ ಅವರು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಮ್ಮನ್ನು ಒಡೆಯಲು ಬಯಸುತ್ತಾರೆ. ಇದು ಕೆನಡಾದ ಸ್ವಾಯತ್ತತೆಗೆ ಬೆದರಿಕೆಯಾಗಿದೆ. ಹೀಗಾಗಿ ಕೆನಡಾದ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವ ಪ್ರತಿಜ್ಞೆ ಮಾಡಿದ್ದರು. ಅಲ್ಲದೇ ಭಾರತವು ಕೆನಡಾದ ಪ್ರಮುಖ ಪಾಲುದಾರ ಎಂದು ಹೇಳಿದ್ದರು.
ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಭಾರತ ಸರ್ಕಾರವು ವಿದೇಶಗಳಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದೇ ಪರಿಗಣಿಸುತ್ತದೆ. ಹೀಗಾಗಿ ಟ್ರೂಡೊ ಆಡಳಿತದಲ್ಲಿ ನಡೆದ ಹಿಂದೂ ದೇವಾಲಯಗಳ ಧ್ವಂಸ ಸೇರಿದಂತೆ ಕೆಲವು ಘಟನೆಗಳು ಭಾರತ ಮತ್ತು ಕೆನಡಾ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಯಿತು.
ಕೆನಡಾಕ್ಕೆ ವಲಸೆ ಬರುವವರಲ್ಲಿ ಭಾರತೀಯರು ಹೆಚ್ಚಾಗಿದ್ದು, ಇದು ದೇಶದ ಬಹುದೊಡ್ಡ ಆದಾಯದ ಮೂಲವಾಗಿದೆ. ಭಾರತದಿಂದ ಕೆನಡಾಕ್ಕೆ ಸುಮಾರು 2.8 ಮಿಲಿಯನ್ ವಲಸೆ ಬಂದಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ಶಾಶ್ವತ ನಿವಾಸಿಗಳು ಸೇರಿದ್ದಾರೆ. ಇದರಲ್ಲಿ 4,27,000ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಇದು ಕೆನಡಾದ ಶಿಕ್ಷಣ ಮತ್ತು ಕಾರ್ಮಿಕ ಮಾರುಕಟ್ಟೆಯ ಬಹುದೊಡ್ಡ ಪಾಲಾಗಿದೆ. ಹೀಗಾಗಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಸುಧಾರಣೆ ಕೆನಡಾದ ಅರ್ಥ ವ್ಯವಸ್ಥೆಗೆ ಬಹುಮುಖ್ಯವಾಗಿದೆ.
ಕೆನಡಾ ಮತ್ತು ಭಾರತದ ನಡುವೆ ಸಂಬಂಧ ಹದಗೆಟ್ಟ ಬಳಿಕ ಸ್ಥಗಿತಗೊಂಡಿರುವ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (CEPA) ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ಈ ಒಪ್ಪಂದಡಿಯಲ್ಲಿ 2023ರಲ್ಲಿ ವ್ಯಾಪಾರ ಚಟುವಟಿಕೆ 13.49 ಬಿಲಿಯನ್ ಕೆನಡಿಯನ್ ಡಾಲರ್ ಆಗಿತ್ತು. ಈ ಒಪ್ಪಂದಡಿಯಲ್ಲಿ ಎರಡೂ ದೇಶಗಳು ಎಐ, ಫಿನ್‌ಟೆಕ್, ಹಸಿರು ಶಕ್ತಿ ಮತ್ತು ಉನ್ನತ ಶಿಕ್ಷಣದಲ್ಲಿ ಸಹಕಾರವನ್ನು ವಿಸ್ತರಿಸುವ ಯೋಜನೆ ಮಾಡಿಕೊಂಡಿದ್ದವು. ಕಾರ್ನಿಯವರ ನಾಯಕತ್ವದಲ್ಲಿ ಇದು ಮತ್ತೆ ಪ್ರಾರಂಭವಾದರೆ ಎರಡು ರಾಷ್ಟ್ರಗಳು ಚೀನಾ ಮತ್ತು ಯುಎಸ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎನ್ನಲಾಗುತ್ತದೆ.
