ಲಖನೌ:
ಹೋಳಿ ಹಬ್ಬದ ಆಚರಣೆ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಬಹುತೇಕ ಮಸೀದಿಗಳನ್ನು ಟಾರ್ಪಲಿನ್ ನಿಂದ ಮುಚ್ಚಲಾಗಿದ್ದು ಯಾವುದೇ ಅಹಿತಕ ಘಟನೆಗಳು ನಡೆಯದಂತೆ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗುವ ಐತಿಹಾಸಿಕ ‘ಲಾಟ್ ಸಾಹೇಬ್’ ಮೆರವಣಿಗೆ ಸಾಗುವ ಮಾರ್ಗದಲ್ಲಿನ ಮಸೀದಿಗಳನ್ನು ಟಾರ್ಪಾಲಿನ್‌ನಿಂದ ಮುಚ್ಚಲು ನಗರ ಪಾಲಿಕೆ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ ಆಯುಕ್ತ ವಿಪಿನ್ ಕುಮಾರ್ ಮಿಶ್ರಾ ಅವರು, ‘ಲಾಡ್ ಸಾಹೇಬ್’ ಮೆರವಣಿಗೆ ಸಾಗುವ ಮಾರ್ಗದಲ್ಲಿನ 20 ಮಸೀದಿಗಳಿಗೆ ಟಾರ್ಪಾಲಿನ್ ಹೊದಿಸಲಾಗುವುದು. ಈ ಮಾರ್ಗದುದ್ದಕ್ಕೂ 350 ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಮಸೀದಿಗಳು ಹಾಗೂ ಟ್ರಾನ್ಫ್‌ಫಾರ್ಮರ್‌ಗಳ ಬಳಿ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದರು.
ಅಂದಹಾಗೆ ‘ಲಾಟ್ ಸಾಹೇಬ್’ ಮೆರವಣಿಗೆ 18ನೇ ಶತಮಾನದಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಬ್ರಿಟಿಷ್ ಅಧಿಕಾರಿಯಂತೆ ವೇಷ ತೊಟ್ಟ ವ್ಯಕ್ತಿ ಎತ್ತಿನ ಗಾಡಿಯಲ್ಲಿ ಕುಳಿತುಕೊಂಡಿರುತ್ತಾನೆ. ಈ ಗಾಡಿ ಸಾಗುವಾಗ ಜನರು ಈ ವ್ಯಕ್ತಿಯತ್ತ ಪಾದರಕ್ಷೆಗಳನ್ನು ಎಸೆಯುತ್ತಾರೆ. ಈ ವಿಧಿಯೊಂದಿಗೆ ಹೋಳಿ ಆಚರಣೆಗೆ ಚಾಲನೆ ಸಿಗುತ್ತದೆ.
ಇನ್ನು ಶಹಜಹಾನ್ ಪುರ ಮಾತ್ರವಲ್ಲದೇ ಸಂಭಾಲ್ ನಲ್ಲೂ ಮಸೀದಿಗಳಿಗೆ ಹೊದಿಕೆಗಳನ್ನು ಹೊದಿಸಲಾಗಿದ್ದು, ಸಂಭಾಲ್ ಜಾಮಾ ಮಸೀದಿಯನ್ನು ಟಾರ್ಪಾಲಿನ್ ನಿಂದ ಮುಚ್ಚಲಾಗಿದೆ. ಸಂಭಾಲ್ ಜಿಲ್ಲೆಯ ಆಡಳಿತದ ಅಧಿಕಾರಿಗಳು ಮಸೀದಿಯನ್ನು ಟಾರ್ಪಲಿನ್ ನಿಂದ ಮುಚ್ಚಿದ್ದಾರೆ. ಜಾಮಾ ಮಸೀದಿ ಮಾತ್ರವಲ್ಲದೇ ಹೋಳಿ ಮೆರವಣಿಗೆಯ ಮಾರ್ಗದಲ್ಲಿ ಬರುವ 10 ಮಸೀದಿಗಳನ್ನು ಇದೇ ರೀತಿಯಲ್ಲಿ ಮುಚ್ಚಲಾಗಿದೆ ಎಂದು ಹೇಳಲಾಗಿದೆ.
ಒಂದೇ ತಿಂಗಳಲ್ಲಿ ಹೋಳಿ ಮತ್ತು ರಂಜಾನ್ ಹಬ್ಬ ಬಂದಿದ್ದು, ಎರಡೂ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ನ್ಯಾಯಾಲಯದ ನಿರ್ದೇಶನದ ಜಾಮಾ ಮಸೀದಿಯ ಸಮೀಕ್ಷೆಯ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದ ನಂತರ ಕನಿಷ್ಠ ಐದು ಜನರು ಸಾವನ್ನಪ್ಪಿದರು ಮತ್ತು 20 ಜನರು ಗಾಯಗೊಂಡಿದ್ದರು. ಈ ಜಾಮಾ ಮಸೀದಿಯನ್ನು ಕೆಡವಲಾದ ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಇಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಬಳಿಕ ಪ್ರತಿಭಟನೆ ಭುಗಿಲೆದ್ದು ವ್ಯಾಪಕ ಹಿಂಸಾಚಾರ ಕೂಡ ನಡೆದಿತ್ತು.
