ಲಖನೌ:
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಗುರುವಾರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET)ಯನ್ನು ರದ್ದುಪಡಿಸಬೇಕು ಮತ್ತು ವೈದ್ಯಕೀಯ ಪ್ರವೇಶದ “ಹಳೆಯ ಪದ್ಧತಿ” ಯನ್ನೇ ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಹಲವು ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. “ಅಖಿಲ ಭಾರತ NEET-UG ವೈದ್ಯಕೀಯ ಪರೀಕ್ಷೆಯಲ್ಲಿನ ಅಕ್ರಮಗಳು ಅತ್ಯಂತ ಗಂಭೀರ ವಿಷಯವಾಗಿದ್ದು, ಈ ಪ್ರಕರಣ ಸಂಸತ್ತು ಮತ್ತು ಸುಪ್ರೀಂ ಕೋರ್ಟ್‌ಗೂ ತಲುಪಿದೆ. ಫಲಿತಾಂಶ ಏನೇ ಇರಲಿ, ಲಕ್ಷಾಂತರ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳಿಗೆ ತೊಂದರೆ ಆಗಿದೆ ಮತ್ತು ಮಾನಸಿಕ ಸಂಕಟ ಅನುಭವಿಸಿದ್ದಾರೆ” ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ ‘ಇಂತಹ ಮಹತ್ವದ ಪರೀಕ್ಷೆಯನ್ನು ಸರಿಯಾಗಿ ನಡೆಸುವುದಾಗಿ ಜನರಿಗೆ ಭರವಸೆ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಆದ್ದರಿಂದ ಕೇಂದ್ರೀಕೃತ NEET ಯುಜಿ-ಪಿಜಿ ಪರೀಕ್ಷೆಯನ್ನು ಏಕೆ ರದ್ದುಗೊಳಿಸಬಾರದು? ಹಳೆಯ ವ್ಯವಸ್ಥೆಯನ್ನು ಏಕೆ ಮರುಸ್ಥಾಪಿಸಬಾರದು? ಇದು ಹಲವು ರಾಜ್ಯಗಳ ಬೇಡಿಕೆಯಾಗಿದೆ” ಎಂದು ಮಾಯಾವತಿ ಅವರು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5 ರಂದು ನಡೆದ NEET-UG ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.