ಗಾಂಧಿನಗರ:
ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್‌ಗೆ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯೊಬ್ಬ ಬಲಿಯಾದ ಘಟನೆ ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ನಡೆಯಿತು. ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್‌ನ ಭಾಗವಾಗಿ ಸತತವಾಗಿ ಮೂರು ಗಂಟೆಗಳು ನಿಲ್ಲಲು ಆದೇಶಿಸಿದ್ದರು. ನಂತರ ಅಸ್ವಸ್ಥನಾಗಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಆತ ಮೃತ ಪಟ್ಟಿದ್ದಾನೆ.
ಮೃತ ವಿದ್ಯಾರ್ಥಿಯನ್ನು ಅನಿಲ್ ಮೆಥನಿಯಾ ಎಂದು ಗುರುತಿಸಲಾಗಿದೆ. ಅನಿಲ್ ಧಾರ್ಪುರ್ ಪಟಾನ್‌ನಲ್ಲಿರುವ GMERS ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ. ಹಾಸ್ಟೆಲ್‌ನಲ್ಲಿದ್ದ ಮೂರನೇ ವರ್ಷದ ವಿದ್ಯಾರ್ಥಿಗಳು ಅನಿಲ್ ಹಾಗೂ ಆತನ ಸಹಪಾಠಿಗಳಿಗೆ ರ‍್ಯಾಗಿಂಗ್ ಮಾಡಲು ಸತತ ಮೂರು ಗಂಟೆ ನಿಲ್ಲಲು ಆದೇಶ ನೀಡಿದ್ದರು. ಕೆಲ ಸಮಯದ ನಂತರ ಅನಿಲ್ ಅಸ್ವಸ್ಥನಾಗಿದ್ದು, ಕುಸಿದು ಬಿದ್ದು ಪ್ರಜ್ಞಾಹೀನನಾಗಿದ್ದ. ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ಕಾರಣ ತಿಳಿದು ಬರಲಿದೆ.
ಅನಿಲ್ ಸಾವಿನ ನಂತರ ಮಾತನಾಡಿರುವ ಆತನ ಸೋದರ ಸಂಬಂಧಿ ಧರ್ಮೇಂದ್ರ ” ನಾವು ಗುಜರಾತಿನ ಸುರೇಂದ್ರ ನಗರದಲ್ಲಿ ನೆಲೆಸಿದ್ದೇವೆ. ನಿನ್ನೆ ಅನಿಲ್ ಕಾಲೇಜಿನಿಂದ ಕರೆ ಬಂದಿದ್ದು, ಆತ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಹೇಳಿದ್ದರು. ನಾವು ಇಲ್ಲಿಗೆ ಬಂದು ನೋಡಿದಾಗ ವಿಷಯ ನಮಗೆ ತಿಳಿಯಿತು. ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್‌ನಿಂದಾಗಿ ಆತ ಮೃತಪಟ್ಟಿದ್ದಾನೆ. ಅವನ ಸಾವಿಗೆ ನ್ಯಾಯ ಬೇಕು ಎಂದಿದ್ದಾರೆ.
ವಿದ್ಯಾರ್ಥಿಯ ತಂದೆ ಘಟನೆಯ ಬಗ್ಗೆ ದೂರು ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತನಿಖೆ ಪ್ರಾರಂಭಿಸುತ್ತೇವೆ ಹಾಗೂ ರ‍್ಯಾಗಿಂಗ್ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದು ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಯ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಕಾಲೇಜಿನ ಡೀನ್ ಹಾರ್ದಿಕ್ ಶಾ ವಿದ್ಯಾರ್ಥಿ ಕುಸಿದು ಬಿದ್ದ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಕಾಲೇಜಿನಲ್ಲಿ ಆ್ಯಂಟಿ ರ‍್ಯಾಗಿಂಗ್ ಸಮಿತಿ ಇದೆ. ಆದರೂ ಈ ಘಟನೆ ನಡೆದಿರುವುದು ವಿಷಾದಕರ. ಈಗಾಗಲೇ ನಮ್ಮ ಸಮಿತಿ ತನಿಖೆ ನಡೆಸುತ್ತಿದೆ. ರ‍್ಯಾಗಿಂಗ್ ನಡೆದಿರುವುದು ನಿಜ ಎಂದು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.