ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ ತೆರೆದಿಟ್ಟ ಸದಸ್ಯರು

ಚಿಕ್ಕನಾಯಕನಹಳ್ಳಿ:


ತೀನಂಶ್ರೀ ಭವನದ ಉಳಿಕೆ ಜಾಗವನ್ನು ಸರ್ಕಾರಕ್ಕೆ ವರ್ಗಾಯಿಸಲು ಸಭೆ ವಿರೋಧ

           ಪುರಸಭಾ ವ್ಯಾಪ್ತಿಯಲ್ಲಿ ನಡೆಯದ ಕಾಮಗಾರಿಗಳು, ರಾತ್ರಿಯಾದರೆ ಉರಿಯದ ಬೀದಿ ದೀಪಗಳು, ಸ್ವಚ್ಛತೆ ಕಾಣದ ವಾರ್ಡ್‍ಗಳು ಸೇರಿದಂತೆ ಪುರಸಭೆಗೆ ಸೇರಿದ ಕೊಳವೆಬಾವಿಗಳಲ್ಲಿ ರಿಪೇರಿಗಾಗಿ ಹೊರಕ್ಕೆ ತೆಗೆದ ಮೋಟಾರ್ ಹಾಗೂ ಪಂಪುಗಳು ಮಾಯವಾಗುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಪುರಸಭಾ ಸದಸ್ಯರು ಸಭೆಯಲ್ಲಿ ಆರೋಪಿಸಿದರು.

ಪಟ್ಟಣದ ಪುರಸಭೆಯಲ್ಲಿ ಪುರಸಭಾಧ್ಯಕ್ಷೆ ಪುಷ್ಪ ಹನುಮಂತರಾಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ವಿಷಯಗಳ ಮೇಲೆ ಕೇಂದ್ರೀಕರಿಸಿ ದೂರಿದರು.

ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ :

ಪುರಸಭಾ ಸದಸ್ಯ ಸಿ.ಡಿ.ಸುರೇಶ್ ಮಾತನಾಡಿ, ಪಟ್ಟಣದ ಒಳಭಾಗದಲ್ಲಿ ನಡೆದಿರುವ 150 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತ್ಯಂತ ಅವ್ಯವಸ್ಥೆ ಹಾಗೂ ಕಳಪೆಯಾಗಿದ್ದು, ಈ ಬಗ್ಗೆ ಪುರಸಭಾ ಅಧ್ಯಕ್ಷರೂ ಸೇರಿದಂತೆ ಯಾರಿಗೂ ಮಾಹಿತಿಯಿಲ್ಲದ ಕಾರಣ ಸದರಿ ಕಾಮಗಾರಿಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದರು.

ರಸ್ತೆಗಳನ್ನೂ ವಿಭಜಿಸಿ ಕೆಲವೆಡೆ 7.5 ಮೀಟರ್ ರಸ್ತೆ ಮಾಡಿದ್ದರೆ, ಮತ್ತೆ ಕೆಲವೆಡೆ ನಿಗಧಿತ ಅಳತೆಯನ್ನು ಮುಚ್ಚಿಟ್ಟು ಬೇಕಾಬಿಟ್ಟಿಯಾಗಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದರಲ್ಲದೆ, ಪಾದಚಾರಿ ಮಾರ್ಗಗಳನ್ನು ಕಿತ್ತು ಹಾಗೆ ಬಿಡಲಾಗಿದೆ, ರಸ್ತೆಯ ಮಧ್ಯದಲ್ಲಿಯೆ ಪಟ್ಟಣಕ್ಕೆ ಸರಬರಾಜಾಗುವ ನೀರಿನ ಪೈಪನ್ನು ಸೇರಿಸಿ ರಸ್ತೆ ಮಾಡಲಾಗುತ್ತಿದೆ. ಈಗಾಗಲೆ ಕೆಲವೆಡೆ ಪೈಪ್‍ಗಳು ಒಡೆದುಹೋಗುತ್ತಿವೆ ಎಂದು ಸುರೇಶ್ ಆರೋಪಿಸಿದರು.

ವಿದ್ಯುತ್ ಕಂಬಗಳ ಸ್ಥಿತಿ ಅಧೋಗತಿ :

ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳ ಸ್ಥಿತಿ ಅಧೋಗತಿಯೆನಿಸಿದೆ. ಕೆಲವು ಬೀಳುವ ಸ್ಥಿತಿಯಲ್ಲಿದ್ದರೂ ಇನ್ನೂ ತೆರವುಗೊಳಿಸಿಲ್ಲ. ಮುಖ್ಯ ರಸ್ತೆಯ ಬೀದಿ ದೀಪಗಳು ಬೆರಳೆಣಿಕೆಯಷ್ಟು ಮಾತ್ರ ಉರಿಯುತ್ತಿದ್ದು ರಾತ್ರಿ ಇಡೀ ಪಟ್ಟಣ ಕತ್ತಲೆಯಲ್ಲಿಯೆ ಮುಳುಗುತ್ತಿದೆ.

ಈ ಬಗ್ಗೆ ಪುರಸಭೆಯ ಇಂಜಿನಿಯರ್‍ಗೂ ಸೇರಿದಂತೆ ಯಾರಿಗೂ ಸ್ಪಷ್ಠ ಮಾಹಿತಿ ನೀಡಿಲ್ಲ. 6 ಕಿ.ಮಿ. ರಸ್ತೆ ಪುರಸಭಾ ವ್ಯಾಪ್ತಿಗೆ ಸೇರಿದ್ದು, ಈ ಅವ್ಯವಸ್ಥೆಗಳನ್ನು ಪುರಸಭೆ ಹೊರಬೇಕಿದೆ ಎಂದು ಆರೋಪಿಸಿ ಸದರಿ ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಸುರೇಶ್ ಆಗ್ರಹಿಸಿದರು.

ಸಮಸ್ಯೆ ಹೇಳಿಕೊಂಡ ಸದಸ್ಯರು :

ಜೋಗಿಹಳ್ಳಿ ವಾರ್ಡ್ ಸದಸ್ಯೆ ರತ್ನಮ್ಮ ಮಾತನಾಡಿ, ನಮ್ಮ ಭಾಗದ ರಸ್ತೆ, ಚರಂಡಿ ಸ್ವಚ್ಛತೆಗೆ ಪೌರಕಾರ್ಮಿಕರು ಬರುತ್ತಿಲ್ಲ ಈ ಬಗ್ಗೆ ನಮಗೆ ಸ್ಪಷ್ಟೀಕರಣ ನೀಡಬೇಕೆಂದು ಪಟ್ಟು ಹಿಡಿದರು. ಪುರಸಭಾ ಸದಸ್ಯ ಮಲ್ಲೇಶಯ್ಯ ಮಾತನಾಡಿ, ಪುರಸಭೆಗೆ ಸೇರಿದ ಕೊಳವೆ ಬಾವಿಗಳಲ್ಲಿ ರಿಪೇರಿಗಾಗಿ ಹೊರಕ್ಕೆ ತೆಗೆದ ಮೋಟಾರ್ ಹಾಗೂ ಪಂಪುಗಳು ಮಾಯವಾಗುತ್ತಿವೆ, ರಿಪೇರಿಗಾಗಿ ಹೆಚ್ಚುವರಿ ಬಿಲ್ಲುಗಳನ್ನು ಮಾಡಲಾಗಿದೆ,

ಆದರೆ ಪುರಸಭೆಯ ಲೆಕ್ಕದಲ್ಲಿ ಯಾವುದೆ ಮಾಹಿತಿಯನ್ನು ಇಡುತ್ತಿಲ್ಲ ಎಂದು ಆರೋಪಿಸಿದರಲ್ಲದೆ ಹೊಸದಾಗಿ ಬಂದಿರುವ ನಾಲ್ಕು ಪಂಪ್ ಹಾಗೂ ಮೋಟಾರ್‍ಗಳನ್ನು ಬಳಸಿಕೊಂಡಿಲ್ಲ ಎಂದು ರಾಜಶೇಖರ್ ದೂರಿದರು.

ನಾಗರಿಕರಿಂದ ಮನೆ ಹಾಗೂ ಇನ್ನಿತರ ಕಂದಾಯಗಳಿಗೆ ಪುರಸಭಾ ಸಿಬಂದಿ ರಸೀದಿಯನ್ನು ಈಗಲೂ ಕೈಬರಹದಲ್ಲಿಯೆ ಬರೆಯುತ್ತಿದ್ದಾರೆ ಇದರಲ್ಲಿ ಸಾಕಷ್ಟು ಲೋಪಗಳು ಆಗುತ್ತಿದ್ದು, ಸರ್ಕಾರದ ಆದೇಶದಂತೆ ಕಂಪ್ಯೂಟರ್ ರಶೀದಿ ಪಾವತಿಸುವಂತೆ ಸಲಹೆ ನೀಡಿದರು. ಸಭೆಯಲ್ಲಿ ಜೂನ್‍ನಿಂದ ಸೆಪ್ಟ್‍ಂಬರ್ ಮಾಹೆಯ ಜಮಾ-ಖರ್ಚನ್ನು ಓದಲಾಯಿತು.

ಸಭೆಯಲ್ಲಿ ಮುಖ್ಯಾಧಿಕಾರಿ ಶ್ರೀನಿವಾಸ್, ಪುರಸಭಾ ಉಪಾಧ್ಯಕ್ಷೆ ಪೂರ್ಣಿಮ, ಸದಸ್ಯರಾದ ಸುಧಾಸುರೇಶ್, ಲಕ್ಷ್ಮಿಪಾಂಡುರಂಗಯ್ಯ, ಜಯಮ್ಮ, ರಾಜಮ್ಮ, ಉಮಾ, ರೇಣುಕಮ್ಮ, ಸಿ.ಬಸವರಾಜು, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಮಂಜುನಾಥ, ದಯಾನಂದ, ನಾಗರಾಜ್, ಮಿಲಟರಿಶಿವಣ್ಣ, ಮಲ್ಲಿಕಾರ್ಜುನ್, ಗೋವಿಂದರಾಜು ಉಪಸ್ಥಿತರಿದ್ದರು.

ಜಾಗ ಬಿಟ್ಟು ಕೊಡಲು ನಕಾರ : ತೀನಂಶ್ರೀ ಸ್ಮಾರಕ ಭವನದ ಬಳಿಯ 28*250 ಅಡಿ ಉಳಿಕೆ ಜಾಗದಲ್ಲಿ ಪಾರ್ಕ್ ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸ್ಥಳ ವರ್ಗಾಯಿಸುವ ಪ್ರಸ್ತಾವನೆಗೆ ಸಿ.ಡಿ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಪುರಸಭೆ ಮೇಲ್ದರ್ಜೆಗೇರಿದಾಗ ನಮಗೆ ಜಾಗದ ಕೊರತೆಯಾಗಲಿದೆ, ಈ ಜಾಗ ನಮ್ಮಲ್ಲಿಯೇ ಇರಲಿ ಎಂದಾಗ ಬಹುತೇಕ ಎಲ್ಲ ಸದಸ್ಯರೂ ಸಹಮತ ವ್ಯಕ್ತಪಡಿಸಿದರು.

 

ಪಟ್ಟಣದೊಳಗೆ ಹಾದುಹೋಗುವ 150 ಎ ರಾಷ್ಟೀಯ ಹೆದ್ದಾರಿ ಕಾಮಗಾರಿಯಲ್ಲಿ ಪುರಸಭಾ ವ್ಯಾಪ್ತಿಗೆ ಸೇರಿದ ಚರಂಡಿಗಳನ್ನು ಬೇಕಾಬಿಟ್ಟಿ ನಿರ್ಮಿಸಿದ್ದಾರೆ. ಕೆಲವೆಡೆ ಇರುವುದನ್ನೆ ಕಿತ್ತು ಜೋಡಿಸಿದ್ದರೆ ಮತ್ತೆ ಕೆಲವೆಡೆ ವಾಣಿಜ್ಯ ಮಳಿಗೆ ಅಡ್ಡ ಬಂದ ಕಾರಣ ಅರ್ಧಕ್ಕೆ ಕೈಬಿಟ್ಟಿದ್ದಾರೆ.

-ಸಿ.ಡಿ.ಸುರೇಶ್, ಪುರಸಭಾ ಸದಸ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link