ಹೆಚ್ಚುವರಿ ಆದಾಯಕ್ಕಾಗಿ ಹೊಸ ತಂತ್ರ ಮಾಡಿದ ಮೆಟ್ರೋ

ಬೆಂಗಳೂರು

    ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಪ್ರಯಾಣಿಕರ ದಟ್ಟಣೆ ನಿಜಕ್ಕೂ ಹೆಚ್ಚಾಗಿಯೆ ಇದೆ. ಇದರ ಹೊರತಾಗಿಯೂ ಹೆಚ್ಚುವರಿ ಆದಾಯವನ್ನು ಗಳಿಸುವ ಸಲುವಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ರೈಲುಗಳಲ್ಲಿ ಜಾಹೀರಾತುಗಳನ್ನು ಆಹ್ವಾನಿಸಲು ನಿರ್ಧರಿಸಿದೆ.

    ಇತರ ಹಲವು ಮೆಟ್ರೋ ನಿಗಮಗಳು ಈಗಾಗಲೇ ಜಾಹೀರಾತುಗಳನ್ನು ನೀಡುತ್ತಿರುವಾಗ, 2011 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಬೆಂಗಳೂರು ಮೆಟ್ರೋ, ರೈಲುಗಳ ಸೌಂದರ್ಯ ಕಾಪಾಡಲು ಹಲವು ವರ್ಷಗಳಿಂದ ಈ ಕ್ರಮವನ್ನು ವಿರೋಧಿಸಿತು. ಮೆಟ್ರೋ ಹಸಿರು ಮತ್ತು ನೇರಳೆ ಮಾರ್ಗದ ಆಯ್ದ ನಿಲ್ದಾಣಗಳಲ್ಲಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಜಾಹೀರಾತು ನೀಡಲು ಮುಂದಾಗಿದೆ.

     BMRCL ಆದಾಯವನ್ನು ಹೆಚ್ಚಿಸಲು ರೈಲಿನ ಹೊರಭಾಗಗಳ ಮೇಲಿನ ಜಾಹೀರಾತುಗಳನ್ನು ಹಾಕಲು ಅನುಮತಿ ನೀಡಲಾಗುತ್ತದೆ. ಶೀಘ್ರದಲ್ಲೇ ಟೆಂಡರ್ ಅನ್ನು ಕರೆಯಲಾಗುತ್ತದೆ. ನಮ್ಮ ರೈಲುಗಳ ಸೌಂದರ್ಯಕ್ಕೆ ಧಕ್ಕೆಯಾಗದಂತೆ ರೈಲುಗಳ ಹೊರಭಾಗದಲ್ಲಿ ಜಾಹೀರಾತುಗಳನ್ನು ಅಳವಡಿಸಲಾಗುತ್ತದೆ. ಆದರೆ, ಕಿಟಕಿಗಳು ಓಪನ್ ಆಗಿಯೇ ಇರಲಿವೆ.

    ಬೆಂಗಳೂರು ಮೆಟ್ರೋ ತನ್ನ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ 57 ಆರು ಬೋಗಿಗಳ ರೈಲು ಸೆಟ್‌ಗಳನ್ನು ಹೊಂದಿದೆ. ಪ್ರಸ್ತುತ, ಕೇವಲ ಒಂದು ರೈಲಿಗೆ ಮಾತ್ರ ಜಾಹೀರಾತು ಹಾಕಲಾಗಿದೆ. ಅದೂ ಕೂಡ ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ. ಮಾರ್ಚ್ 2022 ರಲ್ಲಿ, 75 ವರ್ಷಗಳ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲು ಈ ಜಾಹೀರಾತು ಪ್ರದರ್ಶಿಸಲಾಗುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಸ್ವಾತಂತ್ರ್ಯ ಹೋರಾಟವನ್ನು ಎತ್ತಿ ನೆನಪಿಸುವ ಫೋಟೋಗಳು ಮತ್ತು ಘೋಷಣೆಗಳಿವೆ. 

    ಬಿಎಂಆರ್‌ಸಿಎಲ್ ಈಗ ತನ್ನ ರೈಲುಗಳ ಒಳಗೆ ಮತ್ತು ನಿಲ್ದಾಣದ ಆವರಣದಲ್ಲಿ ಮಾತ್ರ ಜಾಹೀರಾತು ನೀಡುತ್ತಿದೆ. ಹೀಗಾಗಿ ಜಾಹೀರಾತುಗಳನ್ನು ನೀಡುವ ಮುನ್ನ, ಆರಂಭದಲ್ಲಿ, ಕೆಲವು ರೈಲುಗಳಲ್ಲಿ ಜಾಹೀರಾತುಗಳನ್ನು ಹಾಕಲಾಗುತ್ತದೆ. ಪ್ರತಿಕ್ರಿಯೆಯನ್ನು ಮತ್ತು ಮೆಟ್ರೋ ಮೇಲ್ಮೈಗಳ ಮೇಲೆ ಅದರ ಪ್ರಭಾವವನ್ನು ನೋಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.

    ಪ್ಯಾಕೇಜ್ ಆಧಾರದಲ್ಲಿ ಜಾಹೀರಾತು ನೀಡಲು ಮುಂದಾಗಿದ್ದು, ಇದಲ್ಲಿ 64 ನಿಲ್ದಾಣಗಳು ಒಳಗೊಂಡಿವೆ. ಪ್ಯಾಕೇಜ್‌ 1ರ ಅಡಿಯಲ್ಲಿ ವೈಟ್‌ಫೀಲ್ಡ್‌ನಿಂದ ಸರ್‌ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದವರೆಗೆ ಒಟ್ಟು 22 ನಿಲ್ದಾಣಗಳು ಬರಲಿವೆ. ಪ್ಯಾಕೇಜ್‌ 2ರ ಅಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ ನಿಲ್ದಾಣದಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಒಟ್ಟು 14 ನಿಲ್ದಾಣಗಳು ಬರಲಿವೆ.

   ಪ್ಯಾಕೇಜ್‌ 3ರ ಅಡಿಯಲ್ಲಿ ನಾಡಪ್ರಭು ಕೆಂಪೇಗೌಡ, ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ 13 ನಿಲ್ದಾಣಗಳು ಬರಲಿವೆ. ಪ್ಯಾಕೇಜ್‌ 4 ರ ಅಡಿಯಲ್ಲಿ ಚಿಕ್ಕಪೇಟೆಯಿಂದ ಸಿಲ್ಕ್‌ ಇನ್‌ಸ್ಟಿಟ್ಯೂಟ್‌ ಮೆಟ್ರೋ ನಿಲ್ದಾಣದವರೆಗೆ ಒಟ್ಟು 15 ನಿಲ್ದಾಣಗಳು ಬರಲಿವೆ. 

   ಹೈಕೋರ್ಟ್ ಆದೇಶದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸಿತ್ತು. 2018 ರ ಆಗಸ್ಟ್‌ನಲ್ಲಿ ಮೆಟ್ರೋ ಪಿಲ್ಲರ್‌ಗಳು ಮತ್ತು ವಯಡಕ್ಟ್‌ಗಳ ಕೆಳಗಿನ ಮೀಡಿಯನ್‌ಗಳ ಮೇಲಿನ ಜಾಹೀರಾತುಗಳಿಂದ ಬರುತ್ತಿದ್ದ ಆದಾಯವು ಕೊನೆಗೊಂಡಿತ್ತು.

    ಈ ಜಾಹೀರಾತುಗಳ ಮೂಲಕ BMRCL ವಾರ್ಷಿಕವಾಗಿ ಸುಮಾರು 10 ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದು, ನೆಟ್‌ವರ್ಕ್ ವಿಸ್ತರಣೆಯನ್ನು ಪರಿಗಣಿಸಿ ಆದಾಯವನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು. ಆದರೆ, ಅದು 2018ರಲ್ಲಿಯೇ ಕೊನೆಯಾಗಿದೆ. ಪ್ರಸ್ತುತ, ಬಿಎಂಆರ್‌ಸಿಎಲ್ ನೆಟ್‌ವರ್ಕ್ 73 ಕಿಮೀ ವಿಸ್ತರಿಸಿದೆ. ಇದನ್ನು 2025-26 ರ ವೇಳೆಗೆ 175 ಕಿಮೀ ಮತ್ತು 2031 ರ ವೇಳೆಗೆ 317 ಕಿಮೀಗೆ ವಿಸ್ತರಿಸಲು ಯೋಜಿಸಲಾಗಿದೆ.

    ಇನ್ನು ಕಳೆದ ವರ್ಷ, ಬಿಎಂಆರ್‌ಸಿಎಲ್ ಶುಲ್ಕರಹಿತ ಆದಾಯವನ್ನು ಹೆಚ್ಚಿಸಲು ನಿಲ್ದಾಣದ ಆವರಣದಲ್ಲಿ ಮತ್ತು ರೈಲು ಬೋಗಿಗಳ ಒಳಗೆ ಚಲನಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡುವುದನ್ನು ಪುನರಾರಂಭಿಸಿದೆ.

 

Recent Articles

spot_img

Related Stories

Share via
Copy link
Powered by Social Snap