ಬೆಂಗಳೂರು
ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಿಹಿ ಸುದ್ದಿಯೊಂದನ್ನು ನೀಡಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚುವರಿ ಸೌಲಭ್ಯ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
ಹೌದು, ಮೆಟ್ರೋ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳನ್ನು ಬದಲಾಯಿಸಲು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬರುತ್ತದೆ. ಈ ವೇಳೆ ನೂಕು ನುಗ್ಗಲು ಹೆಚ್ಚಾಗಿರುತ್ತದೆ. ಹೀಗಾಗಿ ಈ ಸಮಸ್ಯೆಗೆ ಮುಕ್ತಿ ನೀಡಲು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚುವರಿ ಮಾರ್ಗವನ್ನು ತೆರೆದಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 3 ಮತ್ತು 4 ಗ್ರೀನ್ ಲೈನ್‌ನನಿಂದ ನೇರಳೆ ಮಾರ್ಗದ ಪ್ಲಾಟ್‌ಫಾರ್ಮ್ 2ಕ್ಕೆ ಸಂಪರ್ಕಿಸಲು ನಮ್ಮ ಮೆಟ್ರೋ ಹೆಚ್ಚುವರಿ ಮಾರ್ಗವನ್ನು ತೆರೆದಿದೆ. ಈ ಹೆಚ್ಚುವರಿ ಮಾರ್ಗವು ಇಂದು ಮಂಗಳವಾರ ಮೇ 21ರಿಂದ ತೆರೆದಿರಲಿದೆ.
ನಿತ್ಯ 18 ಗಂಟೆಗಳ ಕಾಲ ತೆರೆದಿರುವ ಈ ಹೆಚ್ಚುವರಿ ಮಾರ್ಗದಲ್ಲಿ ಪ್ರಯಾಣಿಕರು ಓಡಾಡುವುದರಿಂದ ಹಾಲಿ ಮಾರ್ಗ, ಎಸ್ಕಿಲೇಟರ್‌ನಲ್ಲಿ ಜನದಟ್ಟಣೆ, ಒತ್ತಡ ಕಡಿಮೆ ಆಗುತ್ತದೆ. ನೂಕು ನುಗ್ಗಲು ತಪ್ಪುತ್ತದೆ. ಆದ್ದರಿಂದ ಸಾರ್ವಜನಿಕರು ಈ ಸೌಲಭ್ಯ ಬಳಸಿಕೊಳ್ಳಬೇಕು ಎಂದು BMRCL ಪ್ರಕಟಣೆಯಲ್ಲಿ ಮನವಿ ಮಾಡಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗವನ್ನು ಸಂಪೂರ್ಣವಾಗಿ ತೆರೆದ ನಂತರ ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ನಾಗಸಂದ್ರ, ಯಲಚೇನಹಳ್ಳಿ, ಕಾಂಗೇರಿ ಹಾಗೂ ವೈಟ್‌ಫಿಲ್ಡ್ ಕಡೆಯಿಂದ ಬರುವವರಲ್ಲಿ ಹಲವರು ಮಾರ್ಗ ಬದಲಾಯಿಸಲು ಈ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಇಳಿಯುತ್ತಾರೆ.
ಎರಡು ಮಾರ್ಗದ ರೈಲುಗಳು ಒಮ್ಮೆಲೆ ಬಂದಾಗ ಏಕಾಎಕಿ ಜನದಟ್ಟಣೆ ಕಂಡು ಬರುತ್ತದೆ. ಅಲ್ಲದೇ ಮೆಜೆಸ್ಟಿಕ್ ಸಾರಿಗೆ ಹಬ್ ಆಗಿರುವ ಕಾರಣ ವಿವಿಧ ಊರುಗಳಿಂದ ಬಂದು ಮೆಟ್ರೋ ಏರುವವರು ಇಲ್ಲಿಂದಲೇ ತೆರಳುತ್ತಾರೆ. ಹೀಗಾಗಿ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಹೆಚ್ಚು ಜನಸಂಚಾರ ಕಂಡು ಬರುತ್ತಿದೆ. ದೈನಂದಿನಲ್ಲಿ ಲಕ್ಷಾಂತರ ಜನರು ಇಂಡರ್‌ಚೇಂಜ್ ನಿಲ್ದಾಣ ಮೂಲಕ ಮೆಟ್ರೋ ರೈಲಿನಲ್ಲಿ ಓಡಾಡುತ್ತಾರೆ.
ಪಿಕ್ ಸಮಯದಲ್ಲಿ ಇವರಿಗೆಲ್ಲ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸಾಕಷ್ಟು ತೊಂದರೆ ಆಗುತ್ತಿತ್ತು. ಇಲ್ಲಿನ ನೂಕುನುಗ್ಗಲು ತಪ್ಪಿಲು ಹಾಲಿ ಮೆಟ್ಟಿಲು ಮಾರ್ಗ, ಎಸ್ಕಿಲೇಟರ್ ಜೊತೆಗೆ ಹೊಸ ಹೆಚ್ಚುವರಿ ಮಾರ್ಗ ತೆರೆಯಲಾಗಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ