ಬೆಂಗಳೂರು:
ಲೋಕಸಭಾ ಚುನಾವಣೆ 2024ರ ಮತದಾನ ದಿನದ ಹಿನ್ನಲೆಯಲ್ಲಿ ಏಪ್ರಿಲ್ 26 ರಂದು ಬೆಂಗಳೂರು ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ.
ಮತದಾನ ನಡೆಯುವ ಏಪ್ರಿಲ್ 26ರಂದು ನಮ್ಮ ಮೆಟ್ರೋದ ಆ ದಿನ ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11.55ವರೆಗೂ ವಿಸ್ತರಿಸಲಾಗಿದೆ.
ಈ ನಾಲ್ಕು ಟರ್ಮಿನಲ್ ಗಳಿಂದ ಸಾಮಾನ್ಯ ದಿನಗಳಲ್ಲಿ ರಾತ್ರಿ 11 ಗಂಟೆಗೆ ಕೊನೆಯ ರೈಲು ಹೊಡುತ್ತಿತ್ತು. ಟರ್ಮಿನಲ್‌ಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಹಾಗೂ ವೈಟ್‌ಫಿಲ್ಡ್‌ನಿಂದ ಶುಕ್ರವಾರ ಕೊನೆಯ ರೈಲು ರಾತ್ರಿ 11:55ಕ್ಕೆ ಹೊರಡಲಿದೆ (ಪ್ರತಿದಿನ 11:15) ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಏಪ್ರಿಲ್ 26 ರಂದು ಮಧ್ಯರಾತ್ರಿ 12.35 ಕ್ಕೆ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ಮೆಜೆಸ್ಟಿಕ್‌ನಿಂದ ರಾತ್ರಿ 11.30ಕ್ಕೆ ಕೊನೆಯ ರೈಲು ಹೊರಡುತ್ತದೆ. ಇನ್ನು ಮತದಾನಕ್ಕೆ ಊರುಗಳಿಗೆ ತೆರಳಿರುವವರು, ಇತರೆ ಎಲ್ಲಾ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ನಮ್ಮ ಮೆಟ್ರೋ ಕೋರಿದೆ.
ಅಂದಹಾಗೆ ಎರಡನೇ ಹಂತದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿದೆ.