ಬೆಂಗಳೂರು:
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಸಿಹಿ ಸುದ್ದಿ ನೀಡಿದೆ. ಇನ್ನು ಮೆಟ್ರೋ ಪ್ರಯಾಣಿಕರು ಐದು ಖಾಸಗಿ ಆ್ಯಪ್ಗಳ ಮೂಲಕವೂ ಟಿಕೆಟ್ ಖರೀದಿ ಮಾಡಿ ಸಂಚಾರ ಮಾಡಬಹುದು. ಎಂಟು ಲಕ್ಷ ಮೆಟ್ರೋ ಪ್ರಯಾಣಿಕರು, ಐದು ಆ್ಯಪ್ಗಳ ಮೂಲಕ ಮೆಟ್ರೋ ಟಿಕೆಟ್ ಖರೀದಿ ಮಾಡಬಹುದು. ಇದರಿಂದ, ಟಿಕೆಟ್ಗಾಗಿ ಇನ್ನು ಸರದಿಯಲ್ಲಿ ನಿಂತು ಕಾಯಬೇಕಿಲ್ಲ. ಮೆಟ್ರೋ ಈಗ ಒಎನ್ಡಿಸಿ ಫ್ಲಾಟ್ ಫಾರಂಗೆ ಬಂದಿರುವುದರಿಂದ ಇದು ಸಾಧ್ಯವಾಗಿದೆ.
ಪ್ರಯಾಣಿಕರು ಮೆಟ್ರೋ ಟಿಕೆಟ್ ಅನ್ನು ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್ ಸೇರಿದಂತೆ ಒಟ್ಟು 5 ಆ್ಯಪ್ಗಳ ಮೂಲಕ ಖರೀದಿಸಲು ಅವಕಾಶ ನೀಡಲಾಗಿದೆ. ಈ ಆ್ಯಪ್ಗಳಲ್ಲಿ ಇದೀಗ ನಮ್ಮ ಮೆಟ್ರೋ ಟಿಕೆಟ್ ಬುಕ್ ಮಾಡಿದರೆ, ಶೇ 20-30 ರಷ್ಟು ಡಿಸ್ಕೌಂಟ್ ಆಫರ್ ಕೂಡ ನೀಡುತ್ತಿವೆ.
ಪ್ರಸ್ತುತ ವಾಟ್ಸ್ಆ್ಯಪ್ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶವಿತ್ತು. ರ್ಯಾಪಿಡೋ ಹಾಗೂ ನಮ್ಮ ಯಾತ್ರಿ ಆ್ಯಪ್ಗಳಲ್ಲಿ ಮೆಟ್ರೋ ಟಿಕೆಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಟಿಕೆಟ್ಗಾಗಿ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್ಸಿಎಲ್ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಟಿಕೆಟ್ ಪಡೆಯಲು ಸರದಿಯಲ್ಲಿ ನಿಂತು ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ಪ್ರಯಾಣಿಕರಿಗೆ ಒಎನ್ಡಿಸಿಯಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗುವುದರಲ್ಲಿ ಅನುಮಾನವಿಲ್ಲ.