ಮೆಟ್ರೋ ಟಿಕೆಟ್ ದರ ಏರಿಕೆ : ಜನಾಭಿಪ್ರಾಯ ಕೋರಿದ ಬಿಎಂಆರ್​ಸಿಎಲ್

ಬೆಂಗಳೂರು

    ನಮ್ಮ ಮೆಟ್ರೋ 2011ರಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ ಎರಡನೇ ಬಾರಿಗೆ ಪ್ರಯಾಣ ದರವನ್ನು ಪರಿಷ್ಕರಿಸುವ ಸಾಧ್ಯತೆ ದಟ್ಟವಾಗಿದೆ. ಈ ವಿಚಾರವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ   ಬುಧವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ‘ಮೆಟ್ರೊ ರೈಲು ದರ ನಿಗದಿ ಸಮಿತಿ’ಗೆ ಅಕ್ಟೋಬರ್ 21 ರೊಳಗೆ ಸಲಹೆಗಳನ್ನು ನೀಡುವಂತೆ ನಾಗರಿಕರನ್ನು ಕೋರಿದೆ.

   ನಾಗರಿಕರು ತಮ್ಮ ಸಲಹೆಗಳನ್ನು  ಇಮೇಲ್ ಮಾಡಬಹುದು ಅಥವಾ 3ನೇ ಮಹಡಿ, ‘ಸಿ’ ಬ್ಲಾಕ್, ಬಿಎಂಟಿಸಿ ಕಾಂಪ್ಲೆಕ್ಸ್, ಕೆಹೆಚ್​​ ರಸ್ತೆ, ಶಾಂತಿನಗರ, ಬೆಂಗಳೂರು-560027 ಈ ವಿಳಾಸಕ್ಕೆ ಪತ್ರ ಬರೆದು ‘ಮೆಟ್ರೊ ರೈಲು ದರ ನಿಗದಿ ಸಮಿತಿ’ ಅಧ್ಯಕ್ಷರಿಗೆ ಅಭಿಪ್ರಾಯ ತಿಳಿಸಬಹುದು ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

   ಇದು ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ಮತ್ತು 34 ರ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ರಚಿಸಲಾದ ಬಿಎಂಆರ್​ಸಿಎಲ್​​ನ ಮೊದಲ ದರ ನಿಗದಿ ಸಮಿತಿಯಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಆರಂಭವಾದ ನಂತರ ಒಂದು ಬಾರಿ ದರ ಪರಿಷ್ಕರಣೆ ಮಾಡಲಾಗಿದೆ. 2017 ರಲ್ಲಿ ಟಿಕೆಟ್ ದರವನ್ನು ಶೇ 10-15 ರಷ್ಟು ಹೆಚ್ಚಿಸಲಾಗಿತ್ತು. 

   ಪ್ರಸ್ತುತ, ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರವು 10 ರೂ. ಮತ್ತು ಗರಿಷ್ಠ 60 ರೂ. ಇದೆ. ಗರಿಷ್ಠ ದರವು ನೇರಳೆ ಮತ್ತು ಹಸಿರು ಮಾರ್ಗಗಳೆರಡರಲ್ಲೂ ದೀರ್ಘ ಪ್ರಯಾಣಕ್ಕೆ ಅನ್ವಯಿಸುತ್ತದೆ. ವೈಟ್‌ಫೀಲ್ಡ್-ಚಲ್ಲಘಟ್ಟ ನಡುವಣ ದೂರ 43.49 ಕಿಮೀ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್-ನಾಗಸಂದ್ರ ನಡುವಣ ದೂರ 30.32 ಕಿಮೀ ಇದ್ದರೂ ಅವುಗಳ ದರ ಒಂದೇ (60 ರೂ) ಆಗಿದೆ.ಸ್ಮಾರ್ಟ್‌ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರಿಗೆ ಶೇಕಡಾ 5 ರಷ್ಟು ರಿಯಾಯಿತಿ ಸಿಗುತ್ತದೆ.  

   ಬಿಎಂಆರ್​ಎಲ್​​​ನ ಆದಾಯವು 2022-23 ರಲ್ಲಿ 422.61 ಕೋಟಿ ರೂ. ಮತ್ತು 2023-24 ರಲ್ಲಿ 573.91 ಕೋಟಿ ರೂ. ಆಗಿತ್ತು. ನಾವು ಮಾರ್ಗಗಳನ್ನು ವಿಸ್ತರಿಸುತ್ತಿದ್ದಂತೆ ನಮ್ಮ ವೆಚ್ಚಗಳು ಹೆಚ್ಚಾಗುತ್ತಿವೆ. ಜೊತೆಗೆ, ನಾವು ನಮ್ಮ ಸಾಲವನ್ನು ಮರುಪಾವತಿ ಮಾಡಬೇಕಿದೆ. ಹಾಗಾಗಿ, ದರ ಪರಿಷ್ಕರಣೆ ಅಗತ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.ಸಮಿತಿಯು ಮುಂದಿನ ಕೆಲವು ತಿಂಗಳುಗಳಲ್ಲಿ ಪ್ರಯಾಣ ದರ ಹೆಚ್ಚಳದ ಕುರಿತು ತನ್ನ ಶಿಫಾರಸುಗಳನ್ನು ಸಲ್ಲಿಸುವ ನಿರೀಕ್ಷೆಯಿದೆ.

Recent Articles

spot_img

Related Stories

Share via
Copy link
Powered by Social Snap