ಬೆಂಗಳೂರು:
ಶೀಘ್ರದಲ್ಲೇ ಬೆಂಗಳೂರು ಮೆಟ್ರೋ ರೈಲು ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಬಗ್ಗೆ ಸುದ್ದಿವಾಹಿನಿಯೊಂದು ವರದಿ ಮಾಡಿದ್ದು, ಹೆಚ್ಚುವರಿ ನಿರ್ವಹಣಾ ವೆಚ್ಚದ ಹಿನ್ನಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿರ್ವಹಣಾ ಪ್ರಾಧಿಕಾರ ಟಿಕೆಟ್ ದರ ಏರಿಕೆಗೆ ಮುಂದಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ, ಹೊಸ ಮಾರ್ಗಗಳ ಲೈನ್ನಲ್ಲಿ ಪಿಎಸ್‌ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ. ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೂ ಪಿಎಸ್‌ಡಿ ಅಳವಡಿಸಲು 700 ರಿಂದ 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಿಸುವ ಕುರಿತು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರತಿ ನಿಲ್ದಾಣದಲ್ಲಿ ಪಿಎಸ್‌ಡಿ ಸ್ಥಾಪನೆಗೆ 8 ರಿಂದ 10 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದಿದ್ದಾರೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಸ್ತಿತ್ವದಲ್ಲಿರುವ ಹಸಿರು ಮತ್ತು ನೇರಳೆ ರೇಖೆಗಳಲ್ಲಿ ಪಿಎಸ್‌ಡಿಗಳನ್ನು ಸ್ಥಾಪಿಸಲು ಅಂದಾಜು 700 ರಿಂದ 800 ಕೋಟಿ ರೂಪಾಯಿಗಳ ಗಮನಾರ್ಹ ಹೂಡಿಕೆಯ ಅಗತ್ಯವಿದೆ. ಈ ಆರ್ಥಿಕ ಹೊರೆಯಿಂದಾಗಿ, BMRCL ಪಿಎಸ್‌ಡಿ ಸ್ಥಾಪನೆಗೆ ಹಣ ನೀಡಲು ಶುಲ್ಕ ಹೆಚ್ಚಳದ ಕುರಿತು ಆಲೋಚಿಸುತ್ತಿದೆ ಎಂದು ಹೇಳಲಾಗಿದೆ.