ಡಿ. 31ರ ತಡರಾತ್ರಿವರೆಗೂ ಮೆಟ್ರೋ, BMTC ಲಭ್ಯ

ಬೆಂಗಳೂರು: 

   ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗಿರುವ ಬೆಂಗಳೂರಿಗರಿಗೆ ಬಿಎಂಆರ್‌ಸಿಎಲ್ ಹಾಗೂ ಬಿಎಂಟಿಸಿ  ವತಿಯಿಂದ ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ. ಡಿಸೆಂಬರ್ 31ರ ತಡರಾತ್ರಿಯಿಂದ ಜನವರಿ 1ರ ಬೆಳಗಿನಜಾವದವರೆಗೂ ಮೆಟ್ರೋ ರೈಲು ಹಾಗೂ ಬಿಎಂಟಿಸಿ ಬಸ್ ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ. ಸಾರ್ವಜನಿಕರು ಸುರಕ್ಷಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

   ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 31ರಂದು ರಾತ್ರಿ ಸಾಮಾನ್ಯ ಸೇವೆ ಮುಗಿದ ಬಳಿಕ ವಿಸ್ತರಿತ ಮೆಟ್ರೋ ಸಂಚಾರ ಆರಂಭವಾಗಲಿದೆ. ಜನವರಿ 1ರ ಬೆಳಗಿನಜಾವ 3:10ರ ವರೆಗೂ ಮೆಟ್ರೋ ರೈಲುಗಳು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

   ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗೆ ರಾತ್ರಿ 1:45 ಗಂಟೆಯವರೆಗೂ ಮೆಟ್ರೋ ಸಂಚಾರ ಇರಲಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಕಡೆಗೆ ರಾತ್ರಿ 2 ಗಂಟೆಯವರೆಗೂ ರೈಲುಗಳು ಓಡಾಡಲಿವೆ. ಹಸಿರು ಮಾರ್ಗದಲ್ಲಿ ರಾತ್ರಿ 2 ಗಂಟೆಯವರೆಗೂ ಮೆಟ್ರೋ ಸೇವೆ ಲಭ್ಯವಿರಲಿದೆ. ಹಳದಿ ಮಾರ್ಗದಲ್ಲಿ ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಬೆಳಗಿನಜಾವ 3:10ರವರೆಗೂ ಮೆಟ್ರೋ ರೈಲುಗಳು ಸಂಚರಿಸಲಿವೆ. ಬೊಮ್ಮಸಂದ್ರದಿಂದ ಆರ್‌.ವಿ ರಸ್ತೆ ಕಡೆಗೆ ರಾತ್ರಿ 1:30ರವರೆಗೂ ಸೇವೆ ಲಭ್ಯವಿರಲಿದೆ. ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಪ್ರತಿ 8 ನಿಮಿಷಗಳಿಗೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳ ಓಡಾಟ ಇರಲಿದೆ. 

   ಎಂ.ಜಿ. ರಸ್ತೆ ಪ್ರದೇಶದಲ್ಲಿ ಭಾರೀ ಜನಸಂದಣಿ ನಿರೀಕ್ಷೆಯಿರುವುದರಿಂದ, ಡಿಸೆಂಬರ್ 31ರ ರಾತ್ರಿ 10 ಗಂಟೆಯಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಆದರೆ ರೈಲುಗಳು ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳು ಓಪನ್‌ ಇರಲಿವೆ. 

   ಡಿಸೆಂಬರ್ 31ರಂದು ತಡರಾತ್ರಿವರೆಗೂ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಪ್ರಮುಖ ಭಾಗಗಳಿಂದ ವಿವಿಧ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ಗಳು ಓಡಾಟ ನಡೆಸಲಿವೆ. ರಾತ್ರಿ 11ರಿಂದ ತಡರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಸೇವೆ ಲಭ್ಯವಿರಲಿದೆ. ಎಲೆಕ್ಟ್ರಾನಿಕ್ಸ್ ಸಿಟಿ, ಜಿಗಣಿ, ಸರ್ಜಾಪುರ, ಕೆಂಗೇರಿ, ಯಲಹಂಕ, ಹೊಸಕೋಟೆ, ಬನಶಂಕರಿ, ಕಾಡುಗೋಡಿ, ಜೀವನ್ ಭೀಮಾನಗರ ಸೇರಿದಂತೆ ಹಲವೆಡೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

Recent Articles

spot_img

Related Stories

Share via
Copy link