ಮಿಡಿಗೇಶಿ :
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಗಡಿ ಗ್ರಾಮ ಚಂದ್ರಬಾವಿ ಗ್ರಾಮಕ್ಕೆ ಕೆಲವೇ ಕಿಲೋ ಮೀಟರ್ ಅಂತರದಲ್ಲಿ, ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ಬೆನಕನಹಳ್ಳಿ ಹೊರವಲಯದ ಸಂತೆ ಗುಟ್ಟೆಗೆ ಹೊಂದಿಕೊಂಡಂತಿರುವ ಬೆಟ್ಟದ ಬಳಿಯಲ್ಲಿ ಆಂಧ್ರ್ರ ರಾಜ್ಯದವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಬೃಹದಾಕಾರದ ಕಲ್ಲಿನ ಡಿಮ್ಮಿಗಳ ಗಣಿಗಾರಿಕೆ ನಡೆಯುತ್ತಿದ್ದು, ಸದರಿ ಕಲ್ಲಿನ ಗಣಿಗಾರಿಕೆಯಿಂದ ಬೃಹದಾಕಾರದ ಕಲ್ಲಿನ ಡಿಮ್ಮಿಗಳನ್ನು ರಾಜ್ಯದ ಚಂದ್ರಬಾವಿ ಗ್ರಾಮದ ಮೂಲಕ ಹಗಲಿರುಳೆನ್ನದೆ ಸಾಗಿಸಲಾಗುತ್ತಿದೆ.
ಮಿಡಿಗೇಶಿ ಗ್ರಾಮದ ಪೋಲೀಸ್ ಠಾಣೆ, ಕಂದಾಯಾಧಿಕಾರಿ, ನಾಡಕಚೇರಿಯ ಮುಂದೆಯೆ ಈ ಅಕ್ರಮ ಸಾಗಾಟ ನಡೆಯುತ್ತಿದೆ. ಅಲ್ಲದೆ ಮಧುಗಿರಿ ಪಟ್ಣಣದ ಪೋಲೀಸ್ ಉಪಾಧೀಕ್ಷಕರ ಕಛೇರಿ, ತಾಲ್ಲೂಕಿನ ದಂಡಾಧಿಕಾರಿ ಕಛೇರಿಗಳ ಮಂಭಾಗ, ಮಧುಗಿರಿ ಪೋಲೀಸ್ ಸರ್ಕಲ್ ಇನ್‍ಸ್ಪೆಕ್ಟರ್ ಠಾಣೆಗೆ ಸ್ವಲ್ಪ ದೂರ ಹಾಗೂ ಎ.ಆರ್.ಟಿ.ಓ ಕಛೇರಿಗೆ ಸ್ವಲ್ಪ ದೂರದಲ್ಲಿ ಪ್ರತಿದಿನ ನಾಲ್ಕಾರು ಲಾರಿಗಳಲ್ಲಿ ಕಲ್ಲಿನ ಡಿಮ್ಮಿಗಳನ್ನು ನಿರಂತರ ಸಾಗಿಸುತ್ತಿದ್ದಾರೆ. ಈ ಮೇಲ್ಕಂಡ ಯಾವುದೆ ಇಲಾಖೆಗಳ ಭಯವಿಲ್ಲದೆ, ಸರ್ಕಾರಕ್ಕೆ ಸಂದಾಯವಾಗಬೇಕಾದ ರಾಜಧನ ನೀಡದೆ, ರಾಜಾರೋಷವಾಗಿ ತುಮಕೂರು, ಬೆಂಗಳೂರಿಗೆ ಕಲ್ಲಿನ ಡಿಮ್ಮಿಗಳನ್ನು ಅಕ್ರಮವಾಗಿ ಹೊತ್ತೊಯ್ಯುತ್ತಿದ್ದಾರೆ.
ಅಕ್ರಮ ಕಲ್ಲು ಡಿಮ್ಮಿಗಳ ಸಾಗಾಣಿಕೆಯನ್ನು ತಡೆಯುವಲ್ಲಿ ಸಂಬಂಧಿಸಿದ ಅಧಿಕಾರಿ ವರ್ಗ ಮೀನಾ ಮೇಷ ಎಣಿಸುತ್ತಿರುವ ಉದ್ದೇಶವಾದರೂ ಏನು? ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಚುನಾಯಿತ ಎಲ್ಲಾ ಜನ ಪ್ರತಿನಿಧಿಗಳು ಕಣ್ಣಿದ್ದೂ ಕಣ್ಣು ಕಾಣದ ಅಂಧರಂತಿರುವುದರ ಒಳ ಮರ್ಮವಾದರೂ ಏನು ಎಂಬುದಾಗಿ ಪ್ರಜ್ಞಾವಂತ ನಾಗರಿಕರು ಹಾಗೂ ಜನ ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಈ ಮೇಲ್ಕಂಡ ಅಧಿಕಾರಿ ವರ್ಗವಾಗಲಿ, ಜನ ಪ್ರತಿನಿಧಿಗಳಾಗಲಿ ಉತ್ತರಿಸುವರೆ? ಜೊತೆಗೆ ಕಲ್ಲಿನ ಡಿಮ್ಮಿಗಳನ್ನು ಸಾಗಿಸುವ ವಾಹನಗಳ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಮುಂದಾಗುವರೇ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ