ವಿವಾಹವಾದ 9 ತಿಂಗಳಿಗೇ ಕೊಲೆಗೈದು ಮನೆಯಲ್ಲೇ ಶವ ಹೂತಿಟ್ಟ ಭೂಪ

 ಮಿಡಿಗೇಶಿ :

      ಒಂಭತ್ತು ತಿಂಗಳ ಹಿಂದೆಯಷ್ಟೆ ಬಲಾತ್ಕಾರದಿಂದ ಸೋದರ ಮಾವ ಹತ್ತನೆ ತರಗತಿ ವಿದ್ಯಾರ್ಥಿನಿಯನ್ನು ವಿವಾಹವಾಗಿದ್ದನು. ಇದೀಗ ಪತಿಯೆ ಪತ್ನಿಯನ್ನು ಕೊಲೆ ಮಾಡಿ, ತನ್ನ ಸಹೋದರರ ಬೆಂಬಲದೊಂದಿಗೆ ಶವವನ್ನು ಪತಿಯ ಅಜ್ಜಿಯ ಮನೆಯಲ್ಲಿ ಹೂತಿದ್ದಾನೆ.

      ಡಿ.23ರಂದು ಶವವನ್ನು ಉಪ ವಿಭಾಗಾಧಿಕಾರಿ, ಪೊಲೀಸ್ ಉಪಾಧೀಕ್ಷಕರು, ಸರ್ಕಲ್ ಇನ್‍ಸ್ಪೆಕ್ಟರ್, ತಾಲ್ಲೂಕು ಶಿಶು ಅಭಿವೃದ್ದಿ ಸಹಾಯಕ ನಿರ್ದೇಶಕ, ತಾಲ್ಲೂಕು ದಂಢಾಧಿಕಾರಿ, ಸ್ಥಳೀಯ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್, ಪ್ರೊಬೇಷನರಿ ಸಬ್‍ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸಮಕ್ಷಮದಲ್ಲಿ ಹೊರ ತೆಗೆದಿರುವುದು ವರದಿಯಾಗಿದೆ.

   ಘಟನೆ ವಿವರ:-

      ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ಹೊಸ ಇಟಕಲೋಟಿ ಗ್ರಾಮದ ಹನುಮಂತರಾಯಪ್ಪ-ಲಕ್ಷ್ಮೀದೇವಮ್ಮರವರ ಮಗಳು ಅಪ್ರಾಪ್ತ ವಯಸ್ಸಿನ ಗಾಯತ್ರಿಯನ್ನು ಲಕ್ಷ್ಮೀದೇವಮ್ಮನವರ ಸಹೋದರ ನರಸಿಂಹಮೂರ್ತಿ (30) ತನ್ನ ಅಕ್ಕ ಮಾವನ ಒಪ್ಪಿಗೆ ಇಲ್ಲದಿದ್ದರೂ ಬಲತ್ಕಾರದಿಂದ ವಿವಾಹವಾಗಿದ್ದನು.

      ವಿವಾಹವಾದ 9 ತಿಂಗಳ ನಂತರ, ಡಿ. 7 ರ ಸೋಮವಾರ ರಾತ್ರಿ ಗಾಯತ್ರಿಯನ್ನು ನರಸಿಂಹಮೂರ್ತಿ ಹೊಡೆದು ಸಾಯಿಸಿ, ತನ್ನ ಅಜ್ಜಿ ಲಕ್ಷ್ಮಮ್ಮನ ಮನೆಯಲ್ಲಿ ಮೃತಳ ಶವವನ್ನು ಹೂತಿದ್ದಾನೆ. ಮೃತಳ ತಂದೆ ಹನುಮಂತರಾಯಪ್ಪ ಡಿ. 20 ರಂದು ಮಿಡಿಗೇಶಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಸದರಿ ದೂರಿನನ್ವಯ ಮಿಡಿಗೇಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡಿ. 23 ರಂದು ಶವವನ್ನು ಹೊರ ತೆಗೆಯಲಾಗಿದೆ. ಮಧುಗಿರಿ ತಾಲ್ಲೂಕು ಆಸ್ಪತೆಯ ವೈದ್ಯ ಡಾ||ನಾಗರಾಜು ಶವ ಪರೀಕ್ಷೆ ನಡೆಸಿದ್ದಾರೆ.

     ಆರೋಪಿ ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದು, ಶವ ಹೂಳಲು ಸಹಕರಿಸಿದ್ದ ಆತನ ಸಹೋದರರಾದ ಮಂಜುನಾಥ ಹಾಗೂ ಸತೀಶ್ ಎನ್ನುವವರನ್ನು ಮಿಡಿಗೇಶಿ ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ನರಸಿಂಹಮೂರ್ತಿ ಪತ್ತೆಗೆ ಬಲೆ ಬೀಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ