ನರೇಗಾ ಹಣ ಲೂಟಿ : ಅಧಿಕಾರಿಗಳ ದಿಢೀರ್ ಭೇಟಿ

 ಮಿಡಿಗೇಶಿ : 

      ಪತ್ರಿಕೆಯಲ್ಲಿ 2 ದಿನಗಳ ಕಾಲ ವರದಿಯಾದ ನರೇಗಾ ಕಾಮಗಾರಿಗಳಲ್ಲಿನ ಅಕ್ರಮಗಳು ವ್ಯಾಪಕ ಚರ್ಚೆಗೆ ಕಾರಣವಾಗಿವೆ. ಅಧಿಕಾರಿ ನೌಕರ ವರ್ಗದಲ್ಲಿ ಸಂಚಲನ ಉಂಟು ಮಾಡಿದೆ. ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಡತ್ತೂರು ಬೆಟ್ಟದಲ್ಲಿ, ಬೆಟ್ಟದ ತಪ್ಪಲಿನಲ್ಲಿ 2021-22ನೆ ಸಾಲಿನ ನರೇಗಾ ಯೋಜನೆಯಡಿ ಮಾಡಲಾಗಿರುವ ಕಳಪೆ ಗುಣಮಟ್ಟದ ರಸ್ತೆ, ರೈತರ ಕಳಪೆ ಒಕ್ಕಣಿಕೆ ಕಣ ಇವೆಲ್ಲ ಈಗ ಒಂದೊಂದಾಗಿ ಬಯಲಾಗತೊಡಗಿವೆ.

     ಈ ಬಗ್ಗೆ ಜೂನ್ 26 ರಂದು ಪತ್ರಿಕೆಯ ಮುಖಪುಟದಲ್ಲಿ “ನರೇಗಾ ಕಾಮಗಾರಿ ಹೆಸರಲ್ಲಿ ಹಣ ಲೂಟಿ, ಅನರ್ಹರು, ಮರಣ ಹೊಂದಿದವರ ಹೆಸರಿನಲ್ಲಿ ಇವೆ ಜಾಬ್ ಕಾರ್ಡ್‍ಗಳು, ಎನ.ಆರ್.ಇ.ಜಿ. ಕಾಮಗಾರಿ ಹೆಸರಿನಲ್ಲಿ ಹಣಲೂಟಿ” ಎಂಬ ಶೀರ್ಷಿಕೆಯಡಿಯಲ್ಲಿ ಸುದೀರ್ಘವಾದ ಸುದ್ದಿ ಪ್ರಕಟಣೆಗೊಂಡಿದ್ದು ಜಿಲ್ಲೆಯ ಬಹುತೇಕ ಜನತೆಯಲ್ಲಿ ಸದರಿ ಸುದ್ದಿಯ ಬಗ್ಗೆ ಬಹಳ ಚರ್ಚೆಗಳು ನಡೆದಿವೆ. ಇನ್ನಿತರೆ ಕಡೆಗಳಲ್ಲಿ ಅಂದರೆ ಜಿಲ್ಲೆಯಲ್ಲಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅನ್ಯಾಯ, ಅವ್ಯವಹಾರಗಳ ಬಗ್ಗೆ ಇನ್ನೂ ಹೆಚ್ಚಿನದಾಗಿ ಸುದ್ದಿ ಪ್ರಕಟಿಸುವಂತೆ, ಅಕ್ರಮಗಳನ್ನು ಬಯಲಿಗೆ ಎಳೆಯುವಂತೆ ಸಾರ್ವಜನಿಕರ ಆಗ್ರಹವಾಗಿದೆ.

ನರೇಗಾ ಯೋಜನೆಯ ಅಕ್ರಮಗಳ ಬಗ್ಗೆ ಸುದಿ ಗಮನಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿರವರು ಜೂನ್ 26 ರಂದೆ ಬೇಡತ್ತೂರು ಹಾಗೂ ಮಿಡಿಗೇಶಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಜಿಲ್ಲಾ ಪಂಚಾಯಿತಿ ಶಾಖಾ ಮುಖ್ಯಸ್ಥರನ್ನು ತಾಲ್ಲೂಕು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ಒಂದು ವಾರಕ್ಕೆ ಎರಡು ಗ್ರಾಮ ಪಂಚಾಯಿತಿಗಳ ತನಿಖಾ ವರದಿಯನ್ನು ನೀಡುವಂತೆ ಆದೇಶಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜೂನ್ 28 ರಂದು ಮಧುಗಿರಿ ತಾಲ್ಲೂಕಿನ ಕಸಬಾ ಹೋಬಳಿಯ ಗಂಜಲಗುಂಟೆ ಮತ್ತು ಐ.ಡಿ.ಹಳ್ಳಿ ಹೋಬಳಿಯ ಐ.ಡಿ.ಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ದಿಢೀರನೆ ನೋಡಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಅಧಿಕಾರಿಗಳು, ಪಿಡಿಓ ಮತ್ತು ಎಂಜಿನಿಯರ್‍ಗೆ ಎಚ್ಚರಿಕೆ ನೀಡಿದ್ದು, ಇಂದು (ಜೂನ್ 29, ಮಂಗಳವಾರ) ದಾಖಲಾತಿ ಸಮೇತ ಜಿಲ್ಲಾ ಪಂಚಾಯಿತಿ ಕಛೇರಿಗೆ ಬರುವಂತೆ ತಿಳಿಸಿದ್ದಾರೆ.

      ಬೇಡತ್ತೂರು ಬೆಟ್ಟ, ಬೆಟ್ಟದ ಕೆಳಗಿನ ಕಳಪೆ ಕಾಮಗಾರಿ ಕುರಿತು ಮೇಲ್ಕಂಡ ಅಧಿಕಾರಿಗಳಿಗೆ ಜನಸಾಮಾನ್ಯರ ಎದುರಿನಲ್ಲೇ ಛೀಮಾರಿಯನ್ನು ಹಾಕಿರುತ್ತಾರೆ. ಮಿಡಿಗೇಶಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿನ ಮಳೆಕೊಯ್ಲು ಕಾಮಗಾರಿ ವೀಕ್ಷಿಸಿದ ಅಧಿಕಾರಿಗಳು, ಕಾಮಗಾರಿ ನಡೆಯುವ ಸ್ಥಳದಲ್ಲಿ ಕಲ್ಲು, ಗುಂಡುಗಳು ಸಿಕ್ಕಿದ ಪಕ್ಷದಲ್ಲಿ ಜೆಸಿಬಿ ಯಂತ್ರದಿಂದ ಕೆಲಸ ನಿರ್ವಹಿಸಲು ಅವಕಾಶವಿರುತ್ತದೆ. ಅಂದರೆ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದು, ಗ್ರಾಮದಲ್ಲಿ ಟಾಂ ಟಾಂ ( ತಮಟೆ ಮೂಲಕ ಪ್ರಚಾರ) ಹೊಡೆಸಿ ಕೆಲಸ ನಿರ್ವಹಿಸಬೇಕು. ಮಿಡಿಗೇಶಿಯಿಂದ ಕಸಾಪುರಕ್ಕೆ ಹಾದು ಹೋಗುವ ರಸ್ತೆ ಬದಿಯಲ್ಲಿನ ಜಮೀನಿನಲ್ಲಿ ತೆಗೆಸಲಾಗಿರುವ ಕೃಷಿ ಹೊಂಡ ರದ್ದುಪಡಿಸಬೇಕು ಎಂದು ಪಿ.ಡಿ.ಓಗೆ ತಿಳಿಸಿದ್ದಾರೆ. ತಾಲ್ಲೂಕು ನೋಡಲ್ ಅಧಿಕಾರಿಗಳಾದ ಆನಂದ್ ಕುಮಾರ್, ನಂಜೇಗೌಡ, ಲೆಕ್ಕಪರಿಶೋಧಕ ಚಂದ್ರಣ್ಣ, ಜಿಲ್ಲಾ ಪಂಚಾಯಿತಿ ಎಇಇ ಸುರೇಶ್, ಜೆಇ ಕಾವ್ಯ, ಪಿಡಿಓ ನವೀನ್ ಕುಮಾರ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap