ಮಿಡಗೇಶಿ :
ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ತೋಟಗಾರಿಕೆ ಬೆಳೆಗೆ ಹಾಗೂ ನೀರಾವರಿ ಪರಿಕರಗಳಿಗೂ ಹಾನಿಯಾಗಿ ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿದೆ.
ಕಸಬಾ ಹೋಬಳಿಯ ವೀರಾಪುರ ಗ್ರಾಮದ ರೈತ ರಮೇಶ್ ಎಂಬುವವರ ಸ.ನಂ.42 ರಲ್ಲಿನ ತಮ್ಮ 7 ಎಕರೆ ಜಮೀನಿನಲ್ಲಿನ ತೋಟಕ್ಕೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜಮೀನಿನಲ್ಲಿದ್ದ ತೆಂಗು, ಬೇವು, ನೇರಳೆ, ಹುಣಸೆ, ಹೊಂಗೆ ಮರಕ್ಕೂ ಬೆಂಕಿಯ ಕೆನ್ನಾಲಿಗೆ ತಗುಲಿದ್ದು, ಸುಮಾರು 2 ಸಾವಿರ ಕೊಬ್ಬರಿಯೂ ಭಸ್ಮವಾಗಿದೆ. ಇದಲ್ಲದೆ ಹನಿ ನೀರಾವರಿಗಾಗಿ ಅಳವಡಿಸಿದ್ದ ಪೈಪುಗಳು, ಕೇಬಲ್ ವೈರ್‍ಗಳು, ಸ್ಟಾರ್ಟರ್ ಸೇರಿದಂತೆ ಹಲವಾರು ಮರಗಳು ಸುಟ್ಟು ಕರಕಲಾಗಿದೆ.
ವಿದ್ಯುತ್ ಇಲಾಖೆಯಿಂದ ಪರಿಹಾರಕ್ಕೆ ಮನವಿ :
ಜಮೀನಿನಲ್ಲಿ ಒಂದೇ ಕಂಬದಲ್ಲಿ ಹಾದು ಹೋಗಿದ್ದ ಸೆಕೆಂಡರಿ ಹಾಗೂ ಪ್ರೈಮರಿ ವಿದ್ಯುತ್ ತಂತಿಗಳು ಒಂದಾದ ಕಾರಣ ತೆಂಗಿನ ಮರಕ್ಕೆ ತಗುಲಿದ ಬೆಂಕಿಯ ಕಿಡಿ ತೋಟವನ್ನೇ ಆಹುತಿ ಪಡೆದಿದ್ದು, ರೈತ ರಮೇಶ್ ಇದಕ್ಕೆ ಬೆಸ್ಕಾಂ ಇಲಾಖೆಯೆ ಕಾರಣವಾಗಿದ್ದು, ಸತ್ಯಾ ಸತ್ಯತೆ ಅರಿತು ಪರಿಹಾರ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ತಕ್ಷಣ ಸ್ಪಂದಿಸಿರುವ ಎಇಇ ಕೃಷ್ಣಮೂರ್ತಿ ಸೋಮವಾರ ಸಿಬ್ಬಂದಿಯನ್ನು ಜಮೀನಿಗೆ ಕಳಿಸಿ ವರದಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶವ ಎತ್ತಲು ಹೋಗಿದ್ದ ಅಗ್ನಿಶಾಮಕ ದಳ :
ಮಧುಗಿರಿಯಲ್ಲಿನ ಅಗ್ನಿಶಾಮಕ ದಳದ ಎರಡು ವಾಹನದಲ್ಲಿ ಒಂದು ನಿರ್ಜೀವವಾಗಿದ್ದು, ಮತ್ತೊಂದು ಶವ ಎತ್ತಲು ಹೋಗಿದ್ದು, ಈ ರೈತನ ನೆರವಿಗೆ ಬರಲು ಸಾಧ್ಯವಾಗಿಲ್ಲ. ಆದರೆ ಒತ್ತಾಯ ಮಾಡಿದ್ದಕ್ಕಾಗಿ ನಂತರ ಕೊರಟಗೆರೆಯಿಂದ ಅಗ್ನಿ ಶಾಮಕ ವಾಹನ ಬಂದಿದ್ದು, ಅಷ್ಟರಲ್ಲಾಗಲೇ ಜಮೀನಿನ ಎಲ್ಲವೂ ಬೆಂಕಿಯಲ್ಲಿ ಉರಿದು ಹೋಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ