ತುಮಕೂರು :
ಕೆಲಸ ಅರಸಿಕೊಂಡು ಹೊರರಾಜ್ಯಗಳಿಗೆ ತೆರಳಿರುವ ತುಮಕೂರು ನಗರದ ಮೂಲದ ಕಾರ್ಮಿಕರು ಶನಿವಾರ ತುಮಕೂರು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಹೊರ ರಾಜ್ಯಗಳಿಂದ ಬರುವವರು ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ತುಮಕೂರು ನಗರದ ಬಸ್ ನಿಲ್ದಾಣಕ್ಕೆ ಬರಲಿದ್ದಾರೆ. ಈ ರೀತಿ ಬಂದವರಿಗೆ ಬಸ್ ನಿಲ್ದಾಣದಲ್ಲೇ ಮೊದಲಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಯಾರಲ್ಲಾದರೂ ರೋಗ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುವುದು. ರೋಗ ಲಕ್ಷಣಗಳಿಲ್ಲದಿದ್ದರೂ ಸಹ ಅವರುಗಳನ್ನು ನಗರದ ಯಾವುದಾದರೂ ಹಾಸ್ಟೆಲ್ ಅಥವಾ ಲಾಡ್ಜ್‍ಗಳಲ್ಲಿ 14 ದಿನಗಳ ಕಾಲ ಕ್ವಾರಂಟೈನ್‍ಗೆ ಕಡ್ಡಾಯವಾಗಿ ಒಳಪಡಿಸಲು ಸಿದ್ದತೆಗಳು ನಡೆದಿವೆ.
ಹೈರಿಸ್ಕ್ ಪ್ರದೇಶಗಳೆಂದು ಪರಿಗಣಿಸಲ್ಪಟ್ಟಿರುವ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್ ಮೊದಲಾದ ಕಡೆಗಳಿಂದ ಬರುವ ತುಮಕೂರು ಮೂಲದ ಕಾರ್ಮಿಕರ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ವಾಸ್ತವವಾಗಿ ಅವರು ಬರುವಾಗ ಆಯಾ ರಾಜ್ಯದ ಗಡಿಗಳಲ್ಲೇ ಚೆಕ್ ಪೋಸ್ಟ್ ನಲ್ಲಿರುವ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ರೋಗ ಲಕ್ಷಣ ಕಾಣಿಸಿದರೆ ಅಲ್ಲೇ ಚಿಕಿತ್ಸೆ/ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡುತ್ತಾರೆ. ಅದನ್ನು ಹೊರತಾಗಿಯೂ ತುಮಕೂರಿಗೆ ಬಂದ ಬಳಿಕ ಸುರಕ್ಷತೆ ಕಾರಣದಿಂದ ನಾವೂ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಂದು ತುಮಕೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ತಿಳಿಸಿದರು.
ಹೋಟೆಲ್ ಬಳಕೆಗೆ ಸರ್ಕಾರಿ ಆದೇಶ :
ಸೋಂಕಿತರನ್ನು ಕ್ವಾರಂಟೈನ್‍ನಲ್ಲಿರಿಸಲು ಕೊನೆಯ ಅವಕಾಶವಾಗಿ ಸಾಮಾನ್ಯ ದರ್ಜೆಯ ಹೋಟೆಲ್ ಗಳನ್ನು ಬಳಸಿಕೊಳ್ಳಲು ಮೇ 6 ರಂದು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಗರಿಷ್ಟ ಕೊಠಡಿ ಬಾಡಿಗೆಯನ್ನೂ (ಪ್ರತಿ ದಿನಕ್ಕೆ ಊಟ ಸೇರಿ) ನಿಗದಿ ಮಾಡಿದೆ. ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ 1,200 ರೂ, ಇತರೆ ಮುನಿಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 900 ರೂ, ಪುರಸಭೆ ವ್ಯಾಪ್ತಿಯಲ್ಲಿ 750 ರೂ. ಎಂದು ಸರ್ಕಾರ ನಿಗದಿಪಡಿಸಿದೆ. ಹೋಟೆಲ್ ಕ್ವಾರಂಟೈನ್ ಗಳಲ್ಲಿರುವ ಸೋಂಕಿತರ ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಸ್.ಡಿ.ಆರ್.ಎಫ್. ಅಡಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಭರಿಸಲು ಸದರಿ ಆದೇಶದಲ್ಲಿ ಸೂಚಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
