ಮುಂಬೈ:
ವರ್ಲಿ BMW ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಘಟನೆ ನಡೆದ ರಾತ್ರಿ ಬೇರೆ ಬೇರೆ ಸ್ಥಳಗಳಲ್ಲಿರುವ ಎರಡು ಬಾರ್ ಗಳಲ್ಲಿ ವಿಪರೀತ ಮದ್ಯ ಸೇವಿಸಿದ್ದರು ಎಂದು ಮುಂಬೈ ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
ಮುಂಬೈ ಪೊಲೀಸರ ಪ್ರಕಾರ, “ತನಿಖೆಯ ಸಮಯದಲ್ಲಿ, ಬಂಧಿತ ಆರೋಪಿ ಮಿಹಿರ್ ಶಾ, ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿರುವುದು ಕಂಡುಬಂದಿದೆ. ಘಟನೆಯ ರಾತ್ರಿ ಎರಡು ವಿಭಿನ್ನ ಸ್ಥಳಗಳಲ್ಲಿರುವ ಬಾರ್ ಗಳಲ್ಲಿ ಅವರು ಮದ್ಯ ಸೇವಿಸಿದ್ದಾರೆ.”
ಜುಹು ಪ್ರದೇಶದಲ್ಲಿರುವ ವೈಸ್ ಗ್ಲೋಬಲ್ ತಪಸ್ ಬಾರ್‌ನಲ್ಲಿ ಮದ್ಯ ಸೇವಿಸಿದ ಬಳಿಕ ಆರೋಪಿ ಮಿಹಿರ್ ಶಾ ಮಲಾಡ್ ಮತ್ತು ಬೊರಿವಲಿ ನಡುವಿನ ಮತ್ತೊಂದು ಸ್ಥಳದಲ್ಲಿರುವ ಬಾರ್ ನಲ್ಲಿ ಮದ್ಯ ಸೇವಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಆರೋಪಿ ಚಾಲಕ ರಾಜಋಷಿ ರಾಜೇಂದ್ರ ಸಿಂಗ್ ಬಿಡಾವತ್ ವಿಚಾರಣೆ ನಡೆಸಿದಾಗ, ಘಟನೆಯ ದಿನ ಭಾನುವಾರದಂದು ಅವರು ಮರೈನ್ ಡ್ರೈವ್‌ಗೆ ಭೇಟಿ ನೀಡಲು ಬಂದಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಚಾಲಕ ರಾಜಋಷಿ ರಾಜೇಂದ್ರ ಸಿಂಗ್ ಕಾರನ್ನು ಬೋರಿವಲಿಯಿಂದ ಮರೀನ್ ಡ್ರೈವ್‌ಗೆ ಕೊಂಡೊಯ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವರು ರೈನ್ ಡ್ರೈವ್‌ಗೆ ತಲುಪಿದ ನಂತರ, ಮಿಹಿರ್ ಶಾ, ಕಾರು ಚಲಾಯಿಸಲು ಚಾಲಕನಿಂದ ಬಲವಂತವಾಗಿ ಕಾರಿನ ಕೀಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.ಏತನ್ಮಧ್ಯೆ, ಹಿಂದಿನ ದಿನ ವರ್ಲಿ ಹಿಟ್ ಅಂಡ್ ರನ್ ಪ್ರಕರಣದ ಈ ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
