ಗುವಾಹಟಿ:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ ಗುರುವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಬಿಟ್‌ಕಾಯಿನ್ , ಕ್ರಿಪ್ಟೋಕರೆನ್ಸಿಗಳ ನೆಪದಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ಹಲವು ಹೂಡಿಕೆದಾರರನ್ನು ವಂಚಿಸಿದ ‘HPZ ಟೋಕನ್’ ಮೊಬೈಲ್ ಆ್ಯಪ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ತಮನ್ನಾ ಭಾಟಿಯಾ ಅವರನ್ನು ಇಡಿ ವಿಚಾರಣೆ ನಡೆಸಿದೆ.
ಇಲ್ಲಿನ ಇಡಿ ವಲಯ ಕಚೇರಿಯಲ್ಲಿ 34 ವರ್ಷದ ನಟಿಯಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಆ್ಯಪ್ ಕಂಪನಿಯ ಕಾರ್ಯಕ್ರಮವೊಂದರಲ್ಲಿ ‘ಸೆಲೆಬ್ರಿಟಿಯಾಗಿ ಕಾಣಿಸಿಕೊಳ್ಳಲು’ ಭಾಟಿಯಾ ಹಣ ಪಡೆದಿದ್ದಾರೆ ಎನ್ನಲಾಗಿದೆ.
ಅವರ ವಿರುದ್ಧ ಅಪರಾಧದಲ್ಲಿ ಭಾಗಿಯಾದ ಯಾವುದೇ ಆರೋಪಗಳಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೂ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ ಕೆಲಸದ ಕಾರಣ ವಿಚಾರಣೆಗೆ ಹಾಜರಾಗಿರಲಿಲ್ಲ. ಗುರುವಾರ ವಿಚಾರಣೆಗೆ ಹಾಜರಾಗುವ ಮೂಲಕ ಇಡಿ ಅಧಿಕಾರಿಗಳಿಗೆ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಟ್‌ಕಾಯಿನ್, ಕ್ರಿಪ್ಟೋಕರೆನ್ಸಿಗಳ ನೆಪದಲ್ಲಿ ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ ಕೊಹಿಮಾ ಸೈಬರ್ ಅಪರಾಧ ಘಟಕದ ಪೊಲೀಸರು ಮಾರ್ಚ್ ನಲ್ಲಿ ಐಪಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.
ಆರೋಪಿಗಳು ಹೂಡಿಕೆದಾರರಿಗೆ ಮೋಸ ಮಾಡಲು ‘HPZ ಟೋಕನ್’ ಮೊಬೈಲ್ ಫೋನ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ