ಹುಳಿಯಾರು:
ನಾಪತ್ತೆಯಾಗಿದ್ದ ನಕಲಿ ಖಾತೆಯುಳ್ಳ ಎಂಆರ್ ಪುಸ್ತಕ ಪತ್ತೆ
ಪಪಂಯ ಮೊದಲ ಸಾಮಾನ್ಯ ಸಭೆಯಲ್ಲಿಯೇ ಕೋಲಾಹಲಕ್ಕೆ ಕಾರಣವಾಗಿದ್ದ ಪೋರ್ಜರಿ ಸಹಿ ಮಾಡಿ ನಕಲಿ ಖಾತೆ ಸೃಷ್ಟಿಸಿ ಲಕ್ಷಾಂತರ ರೂ. ಅವ್ಯವಹಾರ ಮಾಡಲಾಗಿದೆ ಎನ್ನಲಾಗಿದ್ದ,
ನಾಪತ್ತೆಯಾಗಿದ್ದ ಎಂಆರ್ ಪುಸ್ತಕ ಮಂಗಳವಾರ ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಪತ್ತೆಯಾಯಿತು. ಆದರೆ ನಕಲಿ ಖಾತೆ ಸೃಷ್ಠಿಸಿದವರು ನಾವುಗಳೆ ಎಂದು ತಪ್ಪೊಪ್ಪಿಕೊಂಡ ಬಿಲ್ ಕಲೆಕ್ಟರ್‍ಗಳು ಇದರ ಹಿಂದಿರುವವರ ಹೆಸರು ಹೇಳದೆ ಗೌಪ್ಯವಾಗಿಟ್ಟರು.
ಹೌದು, 2015 ಮತ್ತು 2016 ಮೇ ಸಾಲಿನ ಎಂಆರ್ ಪುಸ್ತಕದಲ್ಲಿ ಅಂದಿನ ಪಿಡಿಓ ಸಿದ್ಧರಾಮಣ್ಣ ಅವರ ಸಹಿಯನ್ನು ಪೋರ್ಜರಿ ಮಾಡಿ ಖಾತೆಗಳನ್ನು ಮಾಡಿಕೊಡಲಾಗಿದೆ. ಅಲ್ಲದೆ ಈ ನಕಲಿ ಖಾತೆ ಮಾಡಿಕೊಡಲು ಲಕ್ಷಾಂತರ ರೂ. ಪಡೆಯಲಾಗಿದೆ.
ಆದರೆ ಈ ಪುಸ್ತಕ ಪಂಚಾಯ್ತಿ ಕಚೇರಿಯಲ್ಲಿಲ್ಲದೆ ನಾಪತ್ತೆಯಾಗಿದೆ ಎಂದು ಕಳೆದ ವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚೆಯಾಗಿತ್ತು.
ಮೌನಕ್ಕೆ ಶರಣಾದ ಮುಖ್ಯಾಧಿಕಾರಿ :
ಮುಖ್ಯಾಧಿಕಾರಿ ಮಂಜುನಾಥ್ ಮಾತ್ರ ಹಿಂದಿನ ಪಿಡಿಓ ಅವರಿಂದ ಅಧಿಕಾರ ತೆಗೆದುಕೊಳ್ಳುವಾಗ ಈ ಪುಸ್ತಕ ತಮಗೆ ಹಸ್ತಾಂತರವಾಗಿಲ್ಲ ಎಂದು ದಾಖಲೆ ತೋರಿಸಿ ಮೌನಕ್ಕೆ ಶರಣಾದರು. ನಂತರ ಸಭೆಗೆ ಅಂದಿನ ಪಿಡಿಓ ಸಿ.ಎಸ್.ಸಿದ್ಧರಾಮಣ್ಣ ಅವರನ್ನೆ ಖುದ್ದು ಕರೆಸಿ ಈ ಪ್ರಕರಣದ ವಿವರಣೆ ಪಡೆಯಲು ಅಧ್ಯಕ್ಷ ಕೆಎಮ್‍ಎಲ್ ಕಿರಣ್ ಮುಂದಾದರು.
ಆಗ ಎಂಆರ್ ನಂಬರ್ 179 ರಿಂದ 344 ರ ವರೆವಿಗೆ ಮಾತ್ರ ನನ್ನ ಅವಧಿಯಲ್ಲಿ ಖಾತೆ ಬದಲಾವಣೆ ಮಾಡಲಾಗಿದ್ದು, ಅಲ್ಲಿಂದ 365 ನಂಬರ್ ವರೆವಿಗೂ ನನ್ನ ಸಹಿ ಪೋರ್ಜರಿ ಮಾಡಿ ನಖಲಿ ಖಾತೆ ಮಾಡಿದ್ದಾರೆ ಎಂದು ಖುದ್ದು ಸಿದ್ಧರಾಮಣ್ಣ ಅವರೆ ಸ್ಪಷ್ಟಪಡಿಸಿದ್ದರು.
ಸಭೆಯಿಂದ ಕಾಲ್ಕಿತ್ತಿದ್ದ ಬಿಲ್ ಕಲೆಕ್ಟರ್‍ಗಳು :
ಅಚ್ಚರಿ ಎನ್ನುವಂತೆ ಹಿಂದಿನ ಪಿಡಿಓ ಬಂದ ತಕ್ಷಣ ಇಲ್ಲಿನ ಬಿಲ್ ಕಲೆಕ್ಟರ್‍ಗಳಾದ ವೆಂಕಟೇಶ್ ಹಾಗೂ ಕೃಷ್ಣಮೂರ್ತಿ ಅವರು ಸಭೆಯಿಂದ ಕಾಲ್ಕಿತ್ತಿದ್ದರು. ಅಧ್ಯಕ್ಷರು ದೂರವಾಣಿ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಬರುತ್ತಿತ್ತು.
ಪರಿಣಾಮ ಪ್ರಕರಣವನ್ನು ಪೊಲೀಸರಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತಲ್ಲದೆ ಇವರಿಬ್ಬರನ್ನು ಅಮಾನತ್ತು ಮಾಡಲು ತೀರ್ಮಾನಿಸಿ ಸಭೆ ಮಂಗಳವಾರಕ್ಕೆ ಮುಂದೂಡಲಾಗಿತ್ತು.
ಬಿಲ್ ಕಲೆಕ್ಟರ್ ಮನೆಯಲ್ಲಿತ್ತು ದಾಖಲೆ :
ಮಂಗಳವಾರ ಸಭೆ ಆರಂಭವಾದರೂ ಹಳೆ ವಿಚಾರಗಳ ಚರ್ಚೆಯಲ್ಲೇ ಮಧ್ಯಾಹ್ನದ ಅವಧಿ ಮುಗಿಯಿತು. ಮಧ್ಯಾಹ್ನ ಊಟದ ನಂತರ ಪಂಚಾಯ್ತಿ ದಾಖಲೆಗಳು ನಾಪತ್ತೆಯಾದರೆ ಅಭಿವೃದ್ಧಿ ಮಾಡುವುದಾದರೂ ಹೇಗೆ, ತೆರಿಗೆ ಕಟ್ಟುವ ನಿವಾಸಿಗಳಿಗೆ ಉತ್ತರ ಕೊಡುವುದಾದರೂ ಹೇಗೆ ಎಂದು ಪ್ರಶ್ನಿಸಿ ಅಧ್ಯಕ್ಷರು, ಉಪಾಧ್ಯಕ್ಷರಾದಿಯಾಗಿ ಸರ್ವ ಸದಸ್ಯರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ನಿರ್ಧರಿಸಿದರು.
ಪೊಲೀಸ್ ಠಾಣೆಗೆ ಹೋಗುವ ಮುನ್ನ ಮತ್ತೊಮ್ಮೆ ಬಿಲ್ ಕಲೆಕ್ಟರ್‍ಗಳನ್ನು ಕರೆಸಿ ತಪ್ಪು ಒಪ್ಪಿಕೊಳ್ಳಲು ಕಡೆ ಅವಕಾಶ ಕೊಡಲಾಗುವುದು, ನಾಪತ್ತೆಯಾಗಿದ್ದ ಎಂಆರ್ ಪುಸ್ತಕ ಹುಡುಕಿ ಕೊಡಿ ಎಂದು ಸಭೆ ಸೂಚಿಸಿತು. ಆಗ ಬಿಲ್ ಕಲೆಕ್ಟರ್ ವೆಂಕಟೇಶ್ ತಮ್ಮ ಮನೆಗೆ ಹೋಗಿ ಮನೆಯಲ್ಲಿದ್ದ ಎಂಆರ್ ಪುಸ್ತಕ ತಂದು ಅಧ್ಯಕ್ಷರ ಕೈಗಿತ್ತು, ಎಂಆರ್ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗಿದ್ದು ತಪ್ಪಾಗಿದೆ, ಇದರಲ್ಲಿ ನಕಲಿ ಖಾತೆ ಬರೆದಿರುವುದು ನಾನೇ ಆದರೆ ಸಹಿ ಮಾಡಿಲ್ಲ. ನನ್ನನ್ನು ಕ್ಷಮಿಸಿ ಬಿಡಿ ಎಂದು ಕೇಳಿಕೊಂಡರು.
ಹೆಸರೇಳದ ಬಿಲ್ ಕಲೆಕ್ಟರ್ :
ಎಂಆರ್ ಪುಸ್ತಕಕ್ಕೆ ಸಹಿ ಮಾಡಿದವರು ಯಾರು ಹೇಳಿ ಎಂದು ಸಭೆ ಒತ್ತಾಯ ಮಾಡಿದಾಗ ಕೃಷ್ಣಮೂರ್ತಿ ಸಹಿ ಹಾಕಿಸಿಕೊಂಡು ಬರುವುದಾಗಿ ಎಂಆರ್ ಪುಸ್ತಕ ತೆಗೆದುಕೊಂಡು ಹೋಗುತ್ತಿದ್ದ ಅವನಿಗೆ ಗೊತ್ತು ಎಂದು ವೆಂಕಟೇಶ್ ಹೇಳಿದರು.
ತಕ್ಷಣ ಕೃಷ್ಣಮೂರ್ತಿ ಅವರನ್ನು ಕರೆಸಿ ಸಹಿ ಮಾಡಿದವರ ಬಗ್ಗೆ ಕೇಳಿದಾಗ ತಪ್ಪಾಗಿಗೆ ಕ್ಷಮಿಸಿ ಬಿಡಿ ಎಂದು ಕೇಳಿಕೊಂಡರೆ ವಿನಃ ಸಹಿ ಮಾಡಿದವರಾರು ಎಂದು ಹೇಳಲಿಲ್ಲ, ಆಗ ಇದರ ಹಿಂದಿರುವವರ ಹೆಸರನ್ನಾದರೂ ಹೇಳು ಎಂದು ಸಭೆ ಒತ್ತಾಯ ಮಾಡಿದರೂ ಸಹ ಇಬ್ಬರೂ ಇದರ ಹಿಂದಿರುವವರ ಹೆಸರನ್ನು ಹೇಳಲಿಲ್ಲ.
ಕಾಡಿ-ಬೇಡಿದರೂ ತುಟಿ ಬಿಚ್ಚಲಿಲ್ಲ :
ನೀವು ಮಾಡಿರುವ ಈ ತಪ್ಪುಗಳನ್ನು ಕ್ಷಮಿಸಿ ಬಿಟ್ಟು ಬಿಡುತ್ತೇವೆ. ಇದರ ಹಿಂದಿರುವವರ ಹೆಸರನ್ನು ಹೇಳಿ ಎಂದು ಸಭೆಯಲ್ಲಿದ್ದ ಅನೇಕರು ಕಾಡಿ-ಬೇಡಿದರೂ ಇಬ್ಬರೂ ತುಟಿ ಬಿಚ್ಚಲಿಲ್ಲ.
ಅಧ್ಯಕ್ಷ ಕೆಎಂಎಲ್ ಕಿರಣ್ ಅವರು ಗದರಿ ಬಾಯಿ ಬಿಡಿಸಲು ಪ್ರಯತ್ನಿಸಿದರಾದರೂ ವಿಫಲರಾದರು. ಆದರೆ ಮುಖ್ಯಾಧಿಕಾರಿ ಮಂಜುನಾಥ್ ಮಾತ್ರ ಇದರ ಹಿಂದಿಲ್ಲ ಎಂದೇಳಿದರು. ಅಲ್ಲದೆ ಈ ನಕಲಿ ಖಾತೆಗಳ ಆಧಾರದಲ್ಲಿ ನಮೂನೆ 3 ತೆಗೆದುಕೊಟ್ಟಿಲ್ಲ. ಎಂಆರ್ ಪುಸ್ತಕದಲ್ಲಿ ದಾಖಲು ಮಾಡಿದ್ದೇವೆ ಬಿಟ್ಟರೆ ಮುಂದುವರೆದಿಲ್ಲ ಎಂದರು.
ಕ್ರಮಕ್ಕೆ ಜಿಲ್ಲಾಧಿಕಾರಿಗೆ ದೂರು :
ಇವರು ಎಷ್ಟು ಕೇಳಿದರೂ ಬಾಯಿ ಬಿಡದಿದ್ದಾಗ, ಪೋರ್ಜರಿ ಸಹಿಯ ಮೂಲಕ ಆಗಿರುವ ಖಾತೆಗಳನ್ನು ತಕ್ಷಣ ರದ್ದು ಮಾಡುವಂತೆಯೂ, ನಮೂನೆ 3 ಕೊಟ್ಟಿದ್ದರೆ, ಕೊಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಬರೆಯುವಂತೆಯೂ, ಪೋರ್ಜರಿ ಸಹಿ ಮಾಡಿ ಅಕ್ರಮ ಖಾತೆ ಮಾಡಿರುವವರನ್ನು ಅಮಾನತ್ತು ಮಾಡುವಂತೆಯೂ ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
