ನವದೆಹಲಿ
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಶುಕ್ರವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಚರ್ಚಿಸಿಲು ಮತ್ತೊಮ್ಮೆ ದೆಹಲಿಗೆ ಬರುವುದಾಗಿ ಹೇಳಿದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎರಡು ತಿಂಗಳ ಬಳಿಕ ಸಂಪುಟ ಪುನಾರಚನೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
5ರಿಂದ 6 ಮಂದಿ ಸಚಿವರನ್ನು ಕೈಬಿಡುವ ಚಿಂತನೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಲಾವಣೆ ಬಗ್ಗೆಯೂ ಸಂಪುಟ ಪುನಾರಚನೆ ವೇಳೆಯೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಮುಡಾ ಹಗರಣದ ಸಂಕಷ್ಟದ ಮಧ್ಯೆಯೇ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಾಯಕರ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಮುಡಾ ಸೈಟು ಹಂಚಿಕೆಯ ಅಕ್ರಮಕ್ಕೆ ಸಂಬಂಧಿಸಿದ ಆರೋಪ ನ್ಯಾಯಾಲಯದಲ್ಲಿದೆ. ಕೋರ್ಟ್ ತೀರ್ಮಾನ ನೋಡಿಕೊಂಡು ಮತ್ತೊಮ್ಮೆ ದೆಹಲಿಗೆ ಬರುವುದಾಗಿ ಹೈಕಮಾಂಡ್ಗೆ ಸಿದ್ದರಾಮಯ್ಯ ತಿಳಿಸಿದ್ದಾರೆ.ಸದ್ಯ ಜಮ್ಮುಕಾಶ್ಮೀರ, ಹರಿಯಾಣ ಚುನಾವಣೆಯಲ್ಲಿ ಹೈಕಮಾಂಡ್ ನಾಯಕರು ವ್ಯಸ್ತರಾಗಲಿದ್ದಾರೆ. ಹೀಗಾಗಿ ಚುನಾವಣೆ ಬಳಿಕ ಕರ್ನಾಟಕದ ಸಂಪುಟ ಪುನಾರಚನೆ ಬಗ್ಗೆ ಗಮನ ಹರಿಸಲಿದ್ದಾರೆ.ಸಂಪುಟ ಪುನಾರಚನೆ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆಯಲಿದೆ. ಕೆಲವರು ಸಚಿವ ಸ್ಥಾನ ಬಿಟ್ಟು ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಪ್ಪಲು ಸಿದ್ಧರಿಲ್ಲ. ಹೀಗಾಗಿ ಸಂಪುಟ ಪುನಾರಚನೆ ವೇಳೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಮತ್ತೊಂದೆಡೆ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡಿರುವ ಹೈಕಮಾಂಡ್, ಕರ್ನಾಟಕದ ರಾಜ್ಯಪಾಲರ ನಿರ್ಧಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ. ಬಿಜೆಪಿ ಏನೇ ಆರೋಪಗಳನ್ನು ಮಾಡಿದರೂ ತಿರುಗೇಟು ನೀಡಬೇಕು. ಕಾನೂನು ಹೋರಾಟದ ಮೂಲಕವೇ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ಕೊಡಿ ಎಂದು ಹೈಕಮಾಂಡ್ ನಾಯಕರು ಸಿಎಂ, ಡಿಸಿಎಂ ಸೇರಿ ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.