ಹುಳಿಯಾರು:
ಸರಕಾರದ ಒಂದು ಅಂಗವಾಗಿರುವ ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಮತ್ತೊಬ್ಬರ ಮೇಲೆ ಗೌರವಯುತವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಲಿ. ಇಲ್ಲವಾದರೆ ಜನರೆ ಅವರಿಗೆ ಮುಂದಿನ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಹುಳಿಯಾರು ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಬುಧವಾರದಂದು ಅಭಿವೃದ್ದಿ ಕೆಲಸಗಳಿಗೆ ಗುದ್ದಲಿ ಪೂಜೆ ಮಾಡುವ ಸಂದರ್ಭದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶಿಷ್ಟಾಚಾರ ಉಲಂಘಿಸಿ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿದ ಹುಳಿಯಾರು ಪಪಂ ಸದಸ್ಯರ ಮೇಲೆ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎಂದು ಆರೋಪಿಸಿ ಗುರುವಾರ ಸಿಬಿಎಸ್ ಪತ್ರಿಕಾ ಗೋಷ್ಟಿ ನಡೆಸಿದರು.
ಜನ ಪ್ರತಿನಿಧಿಯಾದವರಿಗೆ ಅವರದೇ ಆದ ಜವಾಬ್ದಾರಿ ಮತ್ತು ಗೌರವ ಇರುತ್ತದೆ. ಪಪಂ ವಾರ್ಡ್ಗಳಲ್ಲಿ ಅದರಲ್ಲೂ ಪಪಂನ ನಗರೋತ್ಥಾನದ ಅನುಧಾನದಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡುವಾಗ ಅಲ್ಲಿನ ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಶಿಷ್ಠಾಚಾರ. ಆದರೆ ಕಾನೂನು ಸಚಿವರೆ ಶಿಷ್ಠಾಚಾರ ಪಾಲಿಸದೆ ಸರ್ವಾಧಿಕಾರಿ ಧೋರಣೆಯಿಂದ ಏಕಾಏಕಿ ತಮ್ಮ ಪಕ್ಷದ ಬೆಂಬಲಿರನ್ನು ಸೇರಿಸಿಕೊಂಡು ಶಂಕುಸ್ಥಾಪನೆ ನಡೆಸುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಆರೋಪಿಸಿದರು.
ಶಿಷ್ಟಾಚಾರ ಉಲ್ಲಂಘಿಸಿರುವ ಬಗ್ಗೆ ವಿರೋಧ ಪಕ್ಷದ ಸದಸ್ಯರು ಪ್ರಶ್ನಿಸಿದರೆ ಏಕ ವಚನದಲ್ಲಿ ಬಾಯಿಗೆ ಬಂದಂತೆ ಅಸಭ್ಯ ಪದಗಳನ್ನು ಬಳಸಿ ರೇಗುತ್ತಿದ್ದಾರೆ. ಸಚಿವರು ಬಳಸಿದ ಅವಾಚ್ಯ ಪದಗಳನ್ನೇ ಜನರ ಎದುರಿಗೆ ತಿರುಗಿಸಿ ಸಚಿವರಿಗೆ ಬೈದರೆ ಸಚಿವರಾಗಿರುವ ನಿಮ್ಮ ಗೌರವ ಏನಾಗುತ್ತದೆ ಎಂಬುದನ್ನು ಅರಿತ್ತಿದ್ದೀರಾ ಎಂದು ಪ್ರಶ್ನಿಸಿದರಲ್ಲದೆ ಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತು ಎನ್ನುವಂತೆ ಸಾರ್ವಜನಿಕ ಸೇವೆಯಲ್ಲಿರುವವರು ಅದರಲ್ಲೂ ಸರ್ಕಾರದ ಪ್ರತಿನಿಧಿಯಾಗಿರುವವರು ಅಳೆದು ತೂಗಿ ಮಾತನಾಡಬೇಕು. ಹಾಗಾಗಿ ಸಚಿವರು ತಮ್ಮ ಮಾತಿನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಕಣ್ಣು ಮುಚ್ಚಿಕೊಂಡು ಕೂರದೆ ಇತ್ತ ಗಮನಹರಿಸಿ. ಹುಳಿಯಾರು ಪಪಂನಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗುತ್ತಿರುವ ಬಗ್ಗೆ ಕ್ರಮ ಕೈಗೊಂಡು ಚುನಾಯಿತ ಎಲ್ಲಾ ಸದಸ್ಯರಿಗೂ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರಲ್ಲದೆ ಸಚಿವರು ಪ್ರಧಾನಮಂತ್ರಿ ಬಾಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಶೇ.100 ರಷ್ಟು ಜಲಜೀವನ ಮೀಷನ್ ಯೋಜನೆಯ ಕೆಲಸವಾಗಿದೆ ಎಂದು ಸುಳ್ಳು ಹೇಳಿಸಿದ್ದಾರೆ. ಆದರೆ ವಾಸ್ತವವಾಗಿ ಹುಳಿಯಾರು ಪಟ್ಟಣದ ವಾರ್ಡ್ಗಳಿಗೆ ಬೋರನಕಣಿವೆ ಜಲಾಶಯದಿಂದ ನೀರು ಪೂರೈಸಿ ಎರಡು ತಿಂಗಳಾಗಿದೆ. ಪಟ್ಟಣದ ಜನರು ದಿನಬಳಕೆಗೂ ಹನಿ ನೀರಿಲ್ಲದೆ ದುಡ್ಡುಕೊಟ್ಟು ಖರೀಧಿಸುತ್ತಿದ್ದಾರೆ ಎಂದರು.
ಯಾವುದೆ ಒಂದು ಯೋಜನೆಯನ್ನು ಅನುಷ್ಟಾನಕ್ಕೆ ತರುವ ಮುಂಚೆ ಜನರಿಗಾಗುವ ಒಳಿತು, ಕೆಡುಕನ್ನು ಅರಿಯಬೇಕು. ಆದರೆ ಕುಡಿಯುವ ನೀರಿಗೆ ಮೀಟರ್ ಅಳವಡಿಸಿ ದುಡ್ಡು ವಸೂಲಿಗೆ ಚಿಂತನೆ ನಡೆಸಿರುವ ಭ್ರಷ್ಟ ಬಿಜೆಪಿ ಸರಕಾರಕ್ಕೆ ಜನರು ಸರಿಯಾದ ಪಾಠ ಕಲಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಪಂ.ಸದಸ್ಯರಾದ ಸೈಯದ್ ಜಹೀರ್ಸಾಬ್, ಎಸ್ಆರ್ಎಸ್ ದಯಾನಂದ್, ಮಂಜುನಾಯ್ಕ್, ಮುಖಂಡರಾದ ಶಶಿಧರ್, ರಾಮಚಂದ್ರಯ್ಯ, ಸೈಯದ್ ಸಾದತ್, ರಾಘವೇಂದ್ರ, ಹಾರೂನ್ಷರಿಫ್, ಕೇಶವಾಪುರ ಕಿರಣ್ಕುಮಾರ್, ರವಿರಾಜ್, ಗೌಡಿ, ಗಣೇಶ್, ಶಿವನಂಜಪ್ಪ, ನಾಗರಾಜ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








