ಬೆಂಗಳೂರು:
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ (ಎಂವಿಎಸ್‌ಟಿಡಿಸಿ) ಖಾತೆಗಳ ಅಧೀಕ್ಷಕ ಚಂದ್ರಶೇಖರ ಪಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ.
ನಾಗೇಂದ್ರ ಅವರು ಎಸ್‌ಐಟಿ ತನಿಖೆಯ ನಂತರ ಕಳಂಕವಿಲ್ಲದೆ ಹೊರಬಂದರೆ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವು ಭರವಸೆ ನೀಡಿ, ತಕ್ಷಣವೇ ರಾಜೀನಾಮೆ ಪಡೆಯಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸುತ್ತಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಆದರೆ ಭಾನುವಾರ ಸಂಜೆ ಎಂಎಲ್‌ಸಿ ಚುನಾವಣೆ ಕುರಿತು ಚರ್ಚಿಸಲು ಕರೆದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಪಡೆದ ನಂತರವೇ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರಕರಣವನ್ನು ಮುಚ್ಚಿಡುವ ಯಾವುದೇ ಪ್ರಯತ್ನ ಅಥವಾ ನಿಷ್ಕ್ರಿಯತೆ ಸರ್ಕಾರ ಮತ್ತು ಪಕ್ಷಕ್ಕೆ ಹಾನಿ ಮಾಡುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಎಂವಿಎಸ್‌ಟಿಡಿಸಿಯ 187.33 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಬ್ಯಾಂಕ್‌ಗೆ ವರ್ಗಾವಣೆ ಮಾಡಿರುವ ಹಗರಣ ಬಯಲಾದ ನಂತರ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದೆ. ಜೂನ್ ಅಥವಾ ಜುಲೈನಲ್ಲಿ ನಡೆಯಲಿರುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷವು ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ನಂತರ 2022 ರಲ್ಲಿ ಅಂದಿನ ಆರ್‌ಡಿಪಿಆರ್ ಸಚಿವ ಕೆಎಸ್ ಈಶ್ವರಪ್ಪ ರಾಜಿನಾಮೆ ನೀಡಿದ್ದ ಪ್ರಕರಣದ ಉದಾಹರಣೆಯನ್ನು ತೆಗೆದುಕೊಳ್ಳಲಾಗುತ್ತಿದೆ.
ಆದರೆ ಅಕ್ರಮವಾಗಿ ಹಣವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ವರ್ಗಾಯಿಸಲು ಎಂವಿಎಸ್‌ಟಿಡಿಸಿ ಅಧಿಕಾರಿಗಳಿಗೆ ಮೌಖಿಕವಾಗಿಯೂ ಯಾವುದೇ ಸೂಚನೆ ನೀಡಿಲ್ಲ ಎಂದು ನಾಗೇಂದ್ರ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಈ ಸಂಬಂಧ ಸಿಎಂ ಹಣಕಾಸು ಇಲಾಖೆ ಅಧಿಕಾರಿಗಳು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದಾರೆ.
ಒಂಬತ್ತು ಸದಸ್ಯರ ತಂಡವು MVSTDC ಖಾತೆಗಳನ್ನು ಆಡಿಟ್ ಮಾಡಿದೆ. ಆರ್ಥಿಕ ವರ್ಷದ ಕೊನೆಯಲ್ಲಿ ಉದ್ಯಮಿಯೊಬ್ಬರಿಗೆ ಸಹಾಯ ಮಾಡಲು ಬ್ಯಾಂಕ್‌ನ ಕಡೆಯಿಂದ ತಪ್ಪಾಗಿದೆ, ಎಂದು ಸರ್ಕಾರದ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರಿನ ಎಂಜಿ ರೋಡ್ ಶಾಖೆಯಲ್ಲಿ ಎಂವಿಎಸ್‌ಟಿಡಿಸಿ ಖಾತೆಗಳಲ್ಲಿನ ವಂಚನೆಯ ವಹಿವಾಟಿನ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗೆ ದೂರು ನೀಡುವುದರೊಂದಿಗೆ ಪ್ರಕರಣವು ಹೊಸ ಆಯಾಮವನ್ನು ಪಡೆದುಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ