ನವದೆಹಲಿ:
ಹೊಸ ವರ್ಚಸ್ಸು ತುಂಬಲು ಮುಂದಾಗಿರುವ ಕೇಂದ್ರ ಸರ್ಕಾರ ಸದ್ಯದಲ್ಲೇ ಸಚಿವ ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ವಿಧಾನಸಭೆಯ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಂತರ ಕೇಂದ್ರ ಸಚಿವ ಸಂಪುಟ ಪುನಾರಚನೆ ನಡೆಯಲಿದೆ, ಈ ಸಂಬಂಧ ಅಮಿತ್ ಶಾ, ಜೆಪಿ ನಡ್ಡಾ ಮತ್ತು ಬಿಎಲ್ ಸಂತೋಷ್ ಸೇರಿದಂತೆ ಪಕ್ಷದ ಉನ್ನತ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂಬಂದ ಪಕ್ಷದ ಯಾವೋಬ್ಬ ನಾಯಕರು ಅಧಿದೃತವಾಗಿ ವಿಷಯ ಬಹಿರಂಗ ಪಡಿಸಿಲ್ಲ, ರಾಜಸ್ಥಾನ ವಿಧಾನಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆ ರಾಜಕೀಯ ಅಜೆಂಡಾಗಳ ಮೇಲೆ ನಡೆಯುತ್ತಿರುವ ವಿಶೇಷ ಪ್ರಚಾರ ಕಾರ್ಯಕ್ರಮದ ಪ್ರಕ್ರಿಯೆ ಮುಗಿದ ಮೇಲೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪಕ್ಷದ ಮೂಲಗಳು ಸುಳಿವು ನೀಡಿವೆ.
ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸದಿಂದ ವಾಪಾಸದ ನಂತರ ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮತ್ತೊಬ್ಬ ಬಿಜೆಪಿ ಹಿರಿಯ ನಾಯಕರು ತಿಳಿಸಿದ್ದಾರೆ. ಕೇಂದ್ರ ಸಚಿವರಿಗೆ ರಾಜ್ಯ ಚುನಾವಣೆಗಳ ಉಸ್ತುವಾರಿ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಾಯಕರುಗಳಿಗೆ ವಿವಿಧ ಚುನಾವಣಾ ಜವಾಬ್ದಾರಿ ನೀಡಲು ಪಕ್ಷದಲ್ಲಿ ನಾಲ್ಕರಿಂದ ಐದು ಹೊಸ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸುವ ಬಗ್ಗೆ ನಾಯಕರು ಚರ್ಚಿಸಿದ್ದಾರೆ ಎಂದು ಮೂಲಗಳು ಸೂಚಿಸಿವೆ. ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ, ತೆಲಂಗಾಣ, ರಾಜಸ್ಥಾನ, ಜಾರ್ಖಂಡ್, ಯುಪಿ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪಕ್ಷದ ಮುಖ್ಯಸ್ಥರ ಆಯ್ಕೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ.