ಮೀರತ್
ಪತಿ ಸೌರಭ್ ರಜಪೂತ್ ಅವರನ್ನು ಭೀಕರವಾಗಿ ಕೊಲೆ ಮಾಡಿ ಅವರ ದೇಹವನ್ನು ನೀಲಿ ಡ್ರಮ್ನಲ್ಲಿ ತುಂಬಿಸಿದ ಪ್ರಕರಣದಲ್ಲಿ ಮೀರತ್ ಜೈಲಿನಲ್ಲಿರುವ ಮುಸ್ಕಾನ್, ನವಜಾತ ಮಗಳಿಗೆ ರಾಧಾ ಎಂದು ಹೆಸರಿಟ್ಟಿದ್ದು, ಈ ನಡುವೆ ಸೌರಭ್ ಕುಟುಂಬಸ್ಥರು ಮಗುವಿನ ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದಾರೆ.ನವೆಂಬರ್ 24 ರಂದು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಮಗು ಜನಿಸಿದ್ದು, ಅದೇ ದಿನ ಸೌರಭ್ ಅವರ ಜನ್ಮದಿನವೂ ಆಗಿತ್ತು ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಶಗುನ್ ಅವರು ಮಾತನಾಡಿ, ಮುಸ್ಕಾನ್ ಅವರನ್ನು ಬುಧವಾರ ಜಿಲ್ಲಾ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಈ ನಡುವೆ ಹೇಳಿಕೆ ನೀಡಿರುವ ಜೈಲು ಸೂಪರಿಂಟೆಂಡೆಂಟ್ ವಿರೇಶ್ ರಾಜ್ ಶರ್ಮಾ ಅವರು, ಆರು ವರ್ಷದವರೆಗೆ ಮಗುವನ್ನು ಮಹಿಳಾ ಬ್ಯಾರಕ್ನಲ್ಲಿ ತಾಯಿಯೊಂದಿಗೆ ಇರಿಸಬಹುದು ಎಂದು ಹೇಳಿದ್ದಾರೆ. ನವಜಾತ ಶಿಶುವಿಗೆ ಜೈಲು ಆಡಳಿತವು ಬಟ್ಟೆ, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಸೌರಭ್ ಅವರ ಸಹೋದರ ರಾಹುಲ್ ಅವರು ಮಾತನಾಡಿ, ಈ ಹಿಂದೆ ಡಿಎನ್ಎ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದೆವು. ಈಗ ಅದೇ ಪರೀಕ್ಷೆಗಾಗಿ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸುತ್ತೇವೆಂದು ಹೇಳಿದ್ದಾರೆ.
ಮುಸ್ಕಾನ್, ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ ಅವರನ್ನು ಕೊಂದು, ಅವರ ದೇಹವನ್ನು ಸಿಮೆಂಟ್ ತುಂಬಿದ ನೀಲಿ ಡ್ರಮ್ನಲ್ಲಿ ಬಚ್ಚಿಟ್ಟಿದ್ದಾರೆ ಎಂದು ರಾಹುಲ್ ಅವರು ಆರೋಪಿಸಿದ್ದಾರೆ. ಇದೇ ವೇಳೆ ಮುಸ್ಕಾನ್ ಹಿರಿಯ ಮಗಳ ಡಿಎನ್ಎ ಪರೀಕ್ಷೆಗೆ ರಾಹುಲ್ ಒತ್ತಾಯಿಸಿದ್ದಾರೆ, ಇಬ್ಬರೂ ಮಕ್ಕಳು ಸೌರಭ್ ಮಕ್ಕಳೇ ಎಂದು ಸಾಬೀತಾದರೆ ಮಾತ್ರ ಅವರ ಜವಾಬ್ದಾರಿಯನ್ನು ನಮ್ಮ ಕುಟುಂಬ ತೆಗೆದುಕೊಳ್ಳುತ್ತದೆ. ಇಲ್ಲದಿದ್ದರೆ, ನಮಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.ಅಲ್ಲದೆ, ಮುಸ್ಕಾನ್ ಡೇಂಜರ್ ಮಹಿಳೆಯಾಗಿದ್ದು, ಮಕ್ಕಳಿಗೆ ಅಪಾಯವನ್ನುಂಟು ಮಾಡಬಹುದು ಎಂದೂ ಆರೋಪಿಸಿದ್ದಾರೆ.ಈ ನಡುವೆ ಸೌರಭ್ ಅವರ ತಾಯಿ ರೇಣು ರಜಪೂತ್ ಅವರೂ ಕೂಡ ಈ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನವಜಾತ ಶಿಶು ಸೌರಭ್ ಅವರ ಮಗು ಎಂದು ದೃಢಪಟ್ಟರೆ ಮಾತ್ರ ನಾವು ಮಗುವನ್ನು ಸ್ವೀಕರಿಸುತ್ತೇವೆಂದು ಹೇಳಿದ್ದಾರೆ.
ಈ ನಡುವೆ ಮುಸ್ಕಾನ್ ಸೌರಭ್ ಅವರ ಹುಟ್ಟುಹಬ್ಬದ ದಿನದಂದೇ ಹೆರಿಗೆಗೆ ಪ್ಲ್ಯಾನ್ ಮಾಡಿದ್ದಳು ಎಂದ ಆರೋಪವನ್ನು ಆಸ್ಪತ್ರೆಯ ಅಧಿಕಾರಿಗಳು ನಿರಾಕರಿಸಿದ್ದು, ಈ ಹೇಳಿಕೆ ಆಧಾರರಹಿತ, ಹೆರಿಗೆಯ ಸಮಯವು ಸ್ವಾಭಾವಿಕವಾಗಿತ್ತು. ಅದನ್ನು ಯೋಜಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮುಸ್ಕಾನ್ ಮಗು ಗಂಡು ಮಗುವಾಗಿದ್ದರೆ ಕೃಷ್ಣ ಎಂದು ಹೆಸರಿಸಲು ನಿರ್ಧರಿಸಿದ್ದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.ಮಾರ್ಚ್ 4 ರ ರಾತ್ರಿ ಮೀರತ್ನ ಇಂದಿರಾನಗರದಲ್ಲಿರುವ ಸೌರಭ್ ಅವರನ್ನು ಹತ್ಯೆ ಮಾಡಲಾಗಿತ್ತು. ಮುಸ್ಕಾನ್ ಮತ್ತು ಸಾಹಿಲ್ ಸೌರಭ್ಗೆ ಮಾದಕ ದ್ರವ್ಯ ನೀಡಿ, ಚಾಕುವಿನಿಂದ ಇರಿದು ಕೊಂದು, ನಂತರ ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ದೇಹದ ಭಾಗಗಳನ್ನು ಸಿಮೆಂಟ್ ತುಂಬಿದ ನೀಲಿ ಡ್ರಮ್ನಲ್ಲಿ ಇರಿಸಿದರು. ಕೊಲೆಯ ನಂತರ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.








