ಮಾಜಿ ಮಿಸ್‌ ಇಂಡಿಯಾ ವಿಜೇತೆಗೆ 99 ಸಾವಿರ ರೂ. ಪಂಗನಾಮ!

ಆಗ್ರಾ:

    ಆಗ್ರಾದ ಮಾಡೆಲ್  ಶಿವಂಕಿತಾ ದೀಕ್ಷಿತ್ ಎಂಬ ಯುವತಿ ಸೈಬರ್ ಕ್ರಿಮಿನಲ್‌ಗಳ  ಡಿಜಿಟಲ್‌ ಅರೆಸ್ಟ್‌ನಿಂದಾಗಿ ಕೇವಲ ಎರಡು ಗಂಟೆಗಳಲ್ಲಿ ಬರೋಬ್ಬರಿ 99 ಸಾವಿರ ಕಳೆದುಕೊಂಡಿರುವ ಸುದ್ದಿಯೊಂದು ಸದ್ಯ ಬೆಳಕಿಗೆ ಬಂದಿದೆ. 

   ಸೈಬರ್‌ ಕ್ರಿಮಿನಲ್‌ಗಳು ಯುವತಿಗೆ ವಾಟ್ಸಾಪ್ ಮೂಲಕ ಕರೆಮಾಡಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿದ್ದು,ಕೂಡಲೇ ಹಣ ಕಳುಹಿಸದಿದ್ದರೆ ಬಂಧಿಸುವಂತೆ ಬೆದರಿಕೆ ಹಾಕಿದ್ದಾರೆ. ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದಿರುವ ಆಗ್ರಾ ಮೂಲದ ಶಿವಂಕಿತಾ ದೀಕ್ಷಿತ್ ಅವರಿಗೆ ವಂಚಕರಿಂದ ವಾಟ್ಸಾಪ್ ಕರೆ ಬಂದಿದ್ದು, ಮಾನವ ಕಳ್ಳಸಾಗಣಿಕೆ ಮತ್ತು ಮಾದಕ ವಸ್ತುಗಳ ಕಳ್ಳಸಾಗಣಿಕೆ ಪ್ರಕರಣಗಳಿಗೆ ಸಂಬಂಧಿಸಿ ಅಕ್ರಮ ಹಣ ಪಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಕ್ರಿಮಿನಲ್‌ ಗಳು ಹೆದರಿಸಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಲೋಹಮಂಡಿ) ಮಯಾಂಕ್ ತಿವಾರಿ ಹೇಳಿದ್ದಾರೆ. 

   ಸಿಬಿಐ ಅಧಿಕಾರಿಗಳಂತೆ ನಟಿಸಿ ವಂಚನೆ ನಡೆಸಿರುವ ಕ್ರಿಮಿನಲ್‌ಗಳು, ನಿಮ್ಮನ್ನು ಬಂಧನದಿಂದ ತಪ್ಪಿಸುತ್ತೇವೆ ಎಂದು ಹೇಳಿ 99 ಸಾವಿರ ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಸೈಬರ್‌ ಕ್ರಿಮಿನಲ್‌ಗಳ ಮಾತು ನಂಬಿ ಶಿವಂಕಿತಾ‌ ಎರಡು ಗಂಟೆಗಳಲ್ಲಿ ಹಣ ಪಾವತಿಸಿದ್ದಾರೆ. ನಂತರ, ಅವರು ತಮ್ಮ ಕುಟುಂಬಕ್ಕೆ ವಿಷಯ ತಿಳಿಸಿದ್ದಾರೆ. ಸ್ನೇಹಿತರೊಂದಿಗೆ ಮಾತನಾಡಿದ ಮೇಲೆ ತಾನು ಸೈಬರ್ ಹಗರಣಕ್ಕೆ ಬಲಿಯಾಗಿದ್ದೇನೆಂದು ಅವರು ಅರಿತುಕೊಂಡಿದ್ದಾರೆ. 

   ಡಿಜಿಟಲ್ ಅರೆಸ್ಟ್ ಎಂಬುದು ಸೈಬರ್ ಹಗರಣವಾಗಿದೆ. ಇದರಲ್ಲಿ ಸ್ಕ್ಯಾಮರ್‌ಗಳು ಸಿಬಿಐ,ಕಸ್ಟಮ್ಸ್ ಅಧಿಕಾರಿ ಮತ್ತು ಕಾನೂನು ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿ ವಂಚಿಸುತ್ತಾರೆ. ಅಪರಿಚಿತ ನಂಬರ್‌ಗಳಿಂದ ವಾಟ್ಸಾಪ್‌ ಮತ್ತು ವಿಡಿಯೊ ಕರೆಗಳ ಮೂಲಕ ಬಂಧಿಸುವುದಾಗಿ ಬೆದರಿಕೆ ಹಾಕುತ್ತಾರೆ.

   ಹೆಚ್ಚಿನ ಸಂದರ್ಭಗಳಲ್ಲಿ, ಸ್ಕ್ಯಾಮರ್‌ಗಳು ಬಲಿಪಶುಗಳನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೀರಿ ಎಂಬ ಸುಳ್ಳು ಆರೋಪ ಹೊರಿಸಿ ಮಾತನಾಡಲು ಆರಂಭಿಸುತ್ತಾರೆ. ಪೊಲೀಸ್‌ ಮತ್ತು ಸಿಬಿಐ ಅಧಿಕಾರಿಗಳಂತೆ ನಟಿಸುತ್ತಾ, ಹಣ ವರ್ಗಾವಣೆ ಮಾಡಲು ಒತ್ತಾಯಿಸುತ್ತಾರೆ. ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿ ಅರೆಸ್ಟ್‌ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಸೈಬರ್‌ ಕ್ರಿಮಿನಲ್‌ಗಳ ಈ ತಂತ್ರವು ಜನರಲ್ಲಿ ಆತಂಕ ಹುಟ್ಟಿಸುತ್ತದೆ. ಆ ಕ್ಷಣಕ್ಕೆ ಏನೂ ತೋಚದೆ ಹಣ ಕಳುಹಿಸಿ ವಂಚನೆಗೆ ಒಳಗಾಗುತ್ತಾರೆ. 

   ಇತ್ತೀಚೆಗಷ್ಟೇ ಮುಂಬೈ ಮೂಲದ 77 ವರ್ಷದ ಮಹಿಳೆಯೊಬ್ಬರಿಂದ ಬರೋಬ್ಬರಿ 4 ಕೋಟಿ ರೂ.ಗಳನ್ನು ಸೈಬರ್‌ ಕಳ್ಳರು ವಂಚಿಸಿದ ಸುದ್ದಿ ವರದಿಯಾಗಿತ್ತು. ಮುಂಬೈ ನಗರದಲ್ಲಿ ವಾಸವಿರುವ ಮಹಿಳೆಯೊಬ್ಬರಿಗೆ ಕರೆಮಾಡಿ ಐಪಿಎಸ್  ಮತ್ತು ಕಾನೂನು ಅಧಿಕಾರಿಗಳಂತೆ ನಟಿಸಿದ ವಂಚಕರು ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು. ನಿರಂತರವಾಗಿ ಒಂದು ತಿಂಗಳ ಕಾಲ ಮಹಿಳೆಯನ್ನು ವಂಚಿಸಿದ್ದರು ಎಂದು ತಿಳಿದು ಬಂದಿತ್ತು.

   ಹೀಗೊಂದು ದಿನ ವಂಚಕರು ಮಹಿಳೆಗೆ ವಾಟ್ಸಾಪ್ ಕರೆ ಮಾಡಿ “ತೈವಾನ್‌ನಲ್ಲಿ ನಿಮ್ಮ ಪಾರ್ಸೆಲ್‌ ಸಿಕ್ಕಿದೆ. 5 ಪಾಸ್‌ಪೋರ್ಟ್‌ಗಳು, ಬ್ಯಾಂಕ್ ಕಾರ್ಡ್, 4 ಕೆಜಿ ಬಟ್ಟೆ ಮತ್ತು ಎಂಡಿಎಂಎ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ. ಮೊದಲ ಕರೆಯಿಂದಲೇ ಮಹಿಳೆಯನ್ನು ವಂಚಿಸಲು ಶುರು ಮಾಡಿದ್ದಾರೆ ಎನ್ನಲಾಗಿತ್ತು.

   ವಂಚಕರ ಮಾತುಗಳಿಗೆ ಬೆದರಿದ್ದ ಮಹಿಳೆ ಮೊದಲಿಗೆ  15 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ವಿಡಿಯೋ ಕಾಲ್ ಕಟ್ ಮಾಡಬಾರದು, ವಿಡಿಯೊ ಆನ್ ಮಾಡಿ ಇಟ್ಟುಕೊಳ್ಳಬೇಕು ಇಲ್ಲವಾದರೆ ಬಂಧಿಸುತ್ತೇವೆಂದು ವಂಚಕರು ಮಹಿಳೆಯನ್ನು ಹೆದರಿಸಿದ್ದರು. ವಂಚಕರ ಫೋನ್‌ ಕರೆಗಳು ನಿರಂತರ ಒಂದು ತಿಂಗಳ ಕಾಲ ಮುಂದುವರೆದಿದ್ದು,ಮಹಿಳೆ ಬರೋಬ್ಬರಿ  4 ಕೋಟಿ ರೂ. ಕಳೆದುಕೊಂಡಿದ್ದರು.

Recent Articles

spot_img

Related Stories

Share via
Copy link