ಜೆರುಸೆಲಂ:
ಲೆಬನಾನ್‌ನಿಂದ ಉಡಾಯಿಸ್ಪಟ್ಟ ಕ್ಷಿಪಣಿ ಸೋಮವಾರ ಇಸ್ರೇಲ್‌ನ ಉತ್ತರದ ಗಡಿ ಮಾರ್ಗಲಿಯಟ್ ಬಳಿಯ ಹಣ್ಣಿ ತೋಟಕ್ಕೆ ಅಪ್ಪಳಿಸಿದ ಪರಿಣಾಮ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟು ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಈ ಮೂವರು ದಕ್ಷಿಣದ ಕೇರಳ ರಾಜ್ಯದವರಾಗಿದ್ದಾರೆ
ಮೃತನನ್ನು ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್‌ವೆಲ್ ಎಂದು ಗುರುತಿಸಲಾಗಿದೆ. ಅವರ ಮೃತದೇಹವನ್ನು ಜಿವ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್‌ನ ಉತ್ತರದ ಗಲಿಲಿ ಪ್ರದೇಶದಲ್ಲಿ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ) ಎಂಬ ತೋಟದಲ್ಲಿ ಕ್ಷಿಪಣಿ ಅಪ್ಪಳಿಸಿತು ಎಂದು ರಕ್ಷಣಾ ಸೇವೆಗಳ ವಕ್ತಾರ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ಝಕಿ ಹೆಲ್ಲರ್ ಪಿಟಿಐಗೆ ತಿಳಿಸಿದರು.
ಈ ಕ್ಷಿಪಣಿ ದಾಳಿಯಿಂದ ಇತರ ಇಬ್ಬರು ಕೇರಳಿಗರಾದ ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗಂಭೀರ ಗಾಯಗೊಂಡಿದ್ದ ಜಾರ್ಜ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಪ-ಸ್ವಲ್ಪ ಗಾಯಗೊಂಡ ಮೆಲ್ವಿನ್ ಅವರನ್ನು ಉತ್ತರ ಇಸ್ರೇಲ್‌ನ ಸಫೆಡ್‌ನ ಜಿವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು.
ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಹಮಾಸ್ ಅನ್ನು ಬೆಂಬಲಿಸಿ ಅಕ್ಟೋಬರ್ 8ರಿಂದ ಉತ್ತರ ಇಸ್ರೇಲ್ ಮೇಲೆ ಪ್ರತಿದಿನ ರಾಕೆಟ್, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿರುವ ಲೆಬನಾನ್‌ನ ಶಿಯಾ ಹಿಜ್ಬುಲ್ಲಾ ಬಣವು ಈ ದಾಳಿಯನ್ನು ನಡೆಸಿದೆ ಎನ್ನಲಾಗಿದೆ. ʼʼದಾಳಿಯಲ್ಲಿ ಒಟ್ಟು ಏಳು ವಿದೇಶಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಗಂಭೀರವಾಗಿದ್ದಾರೆ ಮತ್ತು ಅವರನ್ನು ಆಂಬ್ಯುಲೆನ್ಸ್ ಮತ್ತು ಇಸ್ರೇಲ್ ವಾಯುಪಡೆಯ ಹೆಲಿಕಾಫ್ಟರ್‌ಗಳಲ್ಲಿ ಬೀಲಿನ್ಸನ್, ರಂಬಾಮ್ ಮತ್ತು ಜಿವ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್ ರಕ್ಷಣಾ ಪಡೆ ಫಿರಂಗಿಗಳಿಂದ ನಾವು ಪ್ರತಿದಾಳಿ ನಡೆಸಿದ್ದೇವೆ. ದಕ್ಷಿಣ ಲೆಬನಾನ್ ಪಟ್ಟಣ ಚಿಹಿನೆಯಲ್ಲಿನ ಹಿಜ್ಬುಲ್ಲಾ ಕಾಂಪೌಂಡ್ ಮತ್ತು ಐಟಾ ಅಶ್-ಶಾಬ್‌ನಲ್ಲಿನ ಹಿಜ್ಬುಲ್ಲಾಗೆ ಸೇರಿದ ಮತ್ತೊಂದು ಸ್ಥಳದ ಮೇಲೆ ದಾಳಿ ನಡೆಸಿದ್ದೇವೆ ಎಂದು ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ