ನನ್ನ ಮಗಳ ಕೊಲೆ ಹಿಂದೆ ಶಾಸಕರ ಕೈವಾಡವಿದೆ: ನಿರಂಜನ ಹಿರೇಮಠ

ಹುಬ್ಬಳ್ಳಿ

    ಹುಬ್ಬಳ್ಳಿಯ ನೇಹಾ ಹಿರೇಮಠ  ಹತ್ಯೆ ಪ್ರಕರಣ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ನೇಹಾ ಹಿರೇಮಠ ಹಂತಕನಿಗೆ ಶಿಕ್ಷೆಯಾಗಿಲ್ಲ. 120 ದಿನಗಳಲ್ಲಿ ನೇಹಾಳ ಸಾವಿಗೆ ನ್ಯಾಯ ಕೊಡಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಆದರೆ, ಇನ್ನೂವರೆಗೂ ನ್ಯಾಯ ದೊರೆತಿಲ್ಲ. ನೇಹಾ ಕೊಲೆ ಹಿಂದೆ ಶಾಸಕರ ಕೈವಾಡವಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ನೇಹಾಳ ತಂದೆ ನಿರಂಜನ್​ ಹಿರೇಮಠ ಆಗ್ರಹಿಸಿದರು.

   
    ಕೊಲೆ ಆರೋಪಿ ಫಯಾಜ್​ನನ್ನು ಕೆಲವೇ ಕ್ಷಣಗಳಲ್ಲಿ ಪೊಲೀಸರು ಬಂಧಿಸಿದ್ದರು.ವಿದ್ಯಾರ್ಥಿನಿ ನೇಹಾಳ‌ ಕೊಲೆ ಮಾತ್ರ ರಾಜ್ಯ ಸರ್ಕಾರಕ್ಕೆ ದೊಡ್ಡಮಟ್ಟದ ಇರಿಸುಮುರಿಸು ಮಾಡಿತ್ತು. ನೇಹಾಳ ಕೊಲೆ ಖಂಡಿಸಿ ಅನೇಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದವು. ಅಲ್ಲದೆ, ಕಾಂಗ್ರೆಸ್ ಮುಖಂಡ ಮತ್ತು ಪಾಲಿಕೆ ಸದಸ್ಯ, ನೇಹಾ ತಂದೆ ನಿರಂಜನ್​ ಹಿರೇಮಠ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿ, ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದರು.
   ಆಗ, ಸರ್ಕಾರ ನೇಹಾಳ ಕೊಲೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿತ್ತು. ಅಲ್ಲದೇ ಪಾಸ್ಟ್‌ಟ್ರ್ಯಾಕ್ ನಿರ್ಮಿಸಿ 120 ದಿನಗಳಲ್ಲಿಯೇ ನೇಹಾಳ ಸಾವಿಗೆ ನ್ಯಾಯ ದೊರಕಿಸಿಕೊಡುವ ಬರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೂ ಈ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಕಂಡಿಲ್ಲ ಮತ್ತು ಪಾಸ್ಟ್‌ಟ್ರ್ಯಾಕ್ ಕೋರ್ಟ್ ನಿರ್ಮಾಣವಾಗಿಲ್ಲ. ಹೀಗಾಗಿ ನೇಹಾ ಹತ್ಯೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ನೇಹಾ ತಂದೆ ನಿರಂಜನ್​ ಆಗ್ರಹಿಸಿದ್ದಾರೆ.ಮೊನ್ನೆಯಷ್ಟೇ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ನೇಹಾ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದರು. ಶ್ರೀರಾಮಸೇನೆ ಬೆನ್ನಲ್ಲೇ ನೇಹಾ ತಂದೆಯಿಂದಲೂ ಸಿಬಿಐ ತನಿಖೆಗೆ ಆಗ್ರಹ ಕೇಳಿ ಬಂದಿದೆ.

 

   ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ನನ್ನ ಮಗಳ ಹತ್ಯೆ ನಡೆದು 9 ತಿಂಗಳು ಕಳೆದರೂ ನ್ಯಾಯ ಸಿಗುತ್ತಿಲ್ಲ. ಈ‌ ತನಿಖೆಯ ಹಾದಿ‌ ಎತ್ತ ಸಾಗುತ್ತಿದೆ ಅನ್ನೋದೇ ಗೊತ್ತಾಗುತ್ತಿಲ್ಲ. ಹತ್ಯೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ. ಈ ಪ್ರಕರಣದ ತನಿಖೆಯ ಬಗ್ಗೆ ಶ್ರೀರಾಮಸೇನೆ ಅಷ್ಟೇ ಅಲ್ದೇ ಸಾರ್ವಜನಿಕರಲ್ಲಿಯೂ ಹಲವು ಪ್ರಶ್ನೆ ಮೂಡಿಸಿದೆ. ಆದ್ದರಿಂದ ಸಿಬಿಐ ತನಿಖೆ ಆಗಲಿ ಎಂದಿದ್ದಾರೆ. ಕೊಲೆ ಕೇಸ್​ನಲ್ಲಿ ಶಾಸಕರ ಕೈವಾಡ ಇರುವುದು ಸತ್ಯ ಎಂದು ಕಣ್ಣೀರು ಹಾಕಿದ್ದಾರೆ.

   ರಾಜ್ಯ ಸರ್ಕಾರ 120 ದಿನಗಳಲ್ಲಿ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿತ್ತು. ಆದರೆ, ಒಂಬತ್ತು ತಿಂಗಳು ಕಳೆದರೂ ನನ್ನ ಮಗಳ‌ ಸಾವಿಗೆ ನ್ಯಾಯ ಸಿಗುವ ಭರವಸೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಹಾಗೂ ಸಿಐಡಿಯಿಂದ ನ್ಯಾಯ ಸಿಗುವ ಭರವಸೆ ಕ್ಷೀಣಿಸುತ್ತಿದೆ. ಈ‌ ಕಾರಣದಿಂದಾಗಿಯೇ ಈ‌ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಸಿಬಿಐಗೆ ವಹಿಸಿದರೆ ಮಾತ್ರ ನನ್ನ ಮಗಳ‌ ಸಾವಿಗೆ ನ್ಯಾಯ ಸಿಗುತ್ತದೆ ಎಂದರು.

   ಮತ್ತೊಂದು ಕಡೆ ನೇಹಾ ಕೊಲೆ ಕೇಸ್ ವಿಚಾರವಾಗಿ ಶ್ರೀರಾಮಸೇನೆ ಹೋರಾಟದ ಹಾದಿ ಹಿಡಿದಿದೆ. ಈಗಾಗಲೇ ಕೊಲೆ ಹಂತಕ‌‌ ಫಯಾಜ್ ವ್ಯಾಸಂಗ ಮಾಡತಿದ್ದ ಕಾಲೇಜ್​ಗೆ ಭೇಟಿ ನೀಡಿದ ಪ್ರಮೋದ್​ ಮುತಾಲಿಕ್ ಶಾಶ್ವತವಾಗಿ‌ ಫಯಾಜ್ ನನ್ನ ಸಸ್ಪೆಂಡ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೇಹಾ ಹತ್ಯೆಯಲ್ಲಿ ಕೆಲ‌ ಪ್ರಭಾವಿಗಳು, ಶಾಸಕರು ಕೈವಾಡವಿರುವ ಬಗ್ಗೆ ನನ್ನ ಬಳಿ‌ ಸಾಕ್ಷಿ ಇವೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ ಹೇಳಿದ್ದಾರೆ.

Recent Articles

spot_img

Related Stories

Share via
Copy link