ಮಂಡ್ಯ:
ನಗರದ ಮಿಮ್ಸ್ ಹಾಸ್ಟೆಲ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ನಡೆದಿದೆ. ಕೊಪ್ಪಳ ಮೂಲದ ಭರತ್ ಯತ್ತಿನಮನೆ ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಭರತ್ ಭಾನುವಾರ ರಾತ್ರಿ ಹಾಸ್ಟೆಲ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಿಮ್ಸ್ ನಿರ್ದೇಶಕ ಡಾ. ನರಸಿಂಹಸ್ವಾಮಿ ಮಾತನಾಡಿ, ರಾತ್ರಿ 12 ಗಂಟೆಯವರೆಗೆ ಭರತ್ ಪಕ್ಕದ ರೂಮ್‌ನಲ್ಲಿ ಸ್ನೇಹಿತರೊಂದಿಗೆ ಮಾತಾಡಿದ್ದಾನೆ. ಬಳಿಕ ತನ್ನ ರೂಮ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಜತೆ ಇದ್ದ ಇಬ್ಬರು ಊರಿಗೆ ಹೋಗಿದ್ದರು. ಬೆಳಗ್ಗೆ ಒಬ್ಬ ವಿದ್ಯಾರ್ಥಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಭರತ್ ಫುಟ್ಬಾಲ್ ಆಟದಲ್ಲಿ ಮುಂದೆ ಇದ್ದ. ಕಳೆದ ವರ್ಷ ಭರತ್ ಹೆಚ್ಚು ಕಾಲೇಜಿಗೆ ಅಟೆಂಡ್ ಆಗಿಲ್ಲ. ಹೀಗಾಗಿ ಮೊದಲ ವರ್ಷದ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿರಲಿಲ್ಲ. ಈ ವರ್ಷ ಪರೀಕ್ಷೆಗಳನ್ನು ಕ್ಲಿಯರ್ ಮಾಡಿಕೊಳ್ಳಬೇಕು ಅಂದುಕೊಂಡಿದ್ದ. ಹೀಗಾಗಿ ಪರೀಕ್ಷಾ ಶುಲ್ಕ ಕಟ್ಟಲು ಭರತ್ ಹಾಸ್ಟೆಲ್‌ಗೆ ಬಂದಿದ್ದ. ಆದರೆ ರಾತ್ರಿ ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೋಷಕರಿಗೆ ಮಾಹಿತಿ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.
