ಮಾಧುಸ್ವಾಮಿ ಬದಲಿಸಿದರೆ ಹೋರಾಟ ಅನಿವಾರ್ಯ

ಎಂ ಎನ್ ಕೋಟೆ :

      ರೈತಪರ ಹಾಗೂ ರೈತರ ಕಷ್ಟಕಾರ್ಪಣ್ಯ ಅರಿತು ಕೆಲಸ ಮಾಡುತ್ತಿರುವ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಯವರನ್ನು ಬದಲಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಹಾಗೂ ಮುಂಬರುವ ಎಲ್ಲಾ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹಾಗಲವಾಡಿ ನೀರಾವರಿ ಹೋರಾಟ ಸಮಿತಿ ಸದಸ್ಯ ರಾಜಣ್ಣ ಎಚ್ಚರಿಸಿದ್ದಾರೆ.

      ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಹಾಗಲವಾಡಿ, ಮತ್ತಿಕೆರೆ, ಗಳಿಗೆಕೆರೆ, ಹರಳಕಟ್ಟೆ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸುವ ಕಾಮಗಾರಿಯನ್ನು ಟೆಂಡರ್ ಹಂತಕ್ಕೆ ತಂದಿರುವ ಸಚಿವ ಮಾಧುಸ್ವಾಮಿಯವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಮಾಡುವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

      ಸುಮಾರು ಇಪ್ಪತ್ತೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನೀರಿನ ಯೋಜನೆಗಳಿಗೆ ಚಾಲನೆ ನೀಡಿ, ನೀರು ಹರಿಸುವಲ್ಲಿ ಯಶಸ್ಸು ಕಾಣುತ್ತಿರುವ ಆಶಾಭಾವನೆಯನ್ನು ಹೊಂದಲಾಗಿದೆ. ಇಂತಹ ಸಮಯದಲ್ಲಿ, ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸಿ ಬೇರೆಯವರಿಗೆ ನೀಡುತ್ತಿರುವ ಸುದ್ದಿಯೊಂದು ಹರಿದಾಡುತ್ತಿದೆ. ಯಾವುದೇ ಕಾರಣಕ್ಕೂ ಅವರನ್ನು ಜಿಲ್ಲಾ ಉಸ್ತುವಾರಿಯಿಂದ ಬದಲಾಯಿಸಬಾರದು.  ಹಾಗೇನಾದರೂ ಮಾಡಲು ಸರ್ಕಾರ ಮುಂದಾದರೆ ಜಿಲ್ಲೆಯಾದ್ಯಂತ ಹೋರಾಟದ ಬಿಸಿ ನೋಡಬೇಕಾಗುತ್ತದೆ. ಅಷ್ಟೆ ಅಲ್ಲದೆ ಹಾಗಲವಾಡಿ ಜನತೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸೇರಿ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದರು.

ನೀರಾವರಿ ವಿಚಾರದಲ್ಲಿ ಮಾಜಿ ಪ್ರಧಾನಿಗಳು ಒಬ್ಬರು ಮಾಧುಸ್ವಾಮಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಆದರೆ ಸ್ವಪಕ್ಷದ ಕೆಲವು ರಾಜಕಾರಣಿಗಳು ಮಾಧುಸ್ವಾಮಿ ಅವರ ಏಳಿಗೆಯನ್ನು ಸಹಿಸಲಾರದೆ ಈ ಕೃತ್ಯಕ್ಕೆ ಕೈ ಹಾಕಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಅಂತಹ ಕಿಡಿಗೇಡಿಗಳ ಮಾತಿಗೆ ಓಗೊಟ್ಟು ಸಚಿವರನ್ನು ಬದಲಾಯಿಸಿದಲ್ಲಿ ಮುಂದಿನ ದಿನಗಳಲ್ಲಿ ಪಕ್ಷವು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

      ಮುಖಂಡ ಲೋಕೇಶ್ ಮಾತನಾಡಿ, ನೀರಾವರಿ ಸಚಿವರಾಗಿ ಮಾಧುಸ್ವಾಮಿ ಅವರು ನಾಲೆಯ ಪೂರ್ಣ ಮಾಹಿತಿ ಹೊಂದಿದ್ದಾರೆ. ಅಷ್ಟೆ ಅಲ್ಲದೆ ಎಲ್ಲೆಲ್ಲಿ ನಾಲೆಗಳು ಸ್ಥಗಿತವಾಗಿದೆ ಆ ಜಾಗಕ್ಕೆ ಬಂದು ಸಮಸ್ಯೆ ಬಗೆಹರಿಸಿ ನೀರು ಹರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇಂತಹ ದಕ್ಷ ಹಾಗೂ ಪ್ರಾಮಾಣಿಕ ಸಚಿವರನ್ನು ಇತಿಹಾಸದಲ್ಲೆಲ್ಲೂ ಕಂಡಿಲ್ಲ. ಬಡವರ ಪರ ಇರುವ ಸಚಿವರನ್ನು ಬದಲಾಯಿಸುವ ಪ್ರಮೇಯವೇನಿದೆ ಎಂದು ಪ್ರಶ್ನಿಸಿ, ಇಂತಹವರನ್ನು ಬದಲಾಯಿಸಿದರೆ ಯಾವುದೇ ಕಾರಣಕ್ಕೂ ನಾವು ಸುಮ್ಮನಿರುವುದಿಲ್ಲ. ಉಗ್ರ ಹೋರಾಟ ಮಾಡುತ್ತೇವೆ ಎಂದರು.

      ಹಿರಿಯ ಮುಖಂಡ ಜೆಟ್ಟಿ ಕರಿಯಪ್ಪ ಮಾತನಾಡಿ, ಇಪ್ಪತ್ತೈದು ವರ್ಷದ ನೀರಿನ ಬವಣೆ ಈಗ ತೀರುವ ಆಶಯವನ್ನು ಸಚಿವರಿಂದ ಹೊಂದಿದ್ದೆವು. ಆದರೆ ಇಂತಹ ಸಚಿವರನ್ನೇ ಬದಲಾಯಿಸಲು ಹೊರಟಿರುವುದು ಯಾವ ನ್ಯಾಯ? ಇವರನ್ನು ಬದಲಾಯಿಸಿದರೆ ಮತ್ತೆ ಕಾಮಗಾರಿಗಳು ನೆನೆಗುದಿಗೆ ಬೀಳುತ್ತವೆ. ಈ ಹಿಂದಿನ ಸಚಿವರು, ಶಾಸಕರು ಬರೀ ಆಶ್ವಾಸನೆಯನ್ನು ನೀಡಿರುತ್ತಾರೆ. ಆದರೆ ಇವರು ನೀರು ಹರಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇಂತಹವರನ್ನು ಬದಲಿಸದಿರಿ ಎಂದರು.

      ಈ ಸಂದರ್ಭದಲ್ಲಿ ರಾಜಗೋಪಾಲ್, ನಾಗೇಂದ್ರಪ್ಪ, ಗುರುಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನೀರಾವರಿ ಹೋರಾಟ ಸಮಿತಿ ಸದಸ್ಯ ರಾಜಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಯಾನಂದ್, ಮಹೇಶ್. ಲೋಕೇಶ್. ಚಂದ್ರಶೇಖರ್. ಶಿವರಾಜ್ ಇದ್ದರು.

 
      ನಿಮ್ಮೂರಲ್ಲಿ ಎಷ್ಟು ಓಟು ಹಾಕಿದ್ದೀರಾಂತ ನನ್ನ ನೀರ್ ಕೇಳೋಕೆ ಬಂದಿದ್ದೀರಿ? ನೀರ್ ಬೇಕಂತೆ, ಒಂದ್ ಬಾಟಲ್ ಕೊಟ್ಟು ಕಳಿಸ್ರೊ ಅಂತಾರೆ ನಮ್ಮ ಹಾಲಿ ಸಂಸದ ಬಸವರಾಜು. ಇಂತಹ ಉಡಾಫೆ ಮಾತುಗಳನ್ನಾಡುವ ನಡವಳಿಕೆಯನ್ನು ಬದಲಾಯಿಸಿಕೊಳ್ಳಲಿ. ಸಚಿವರನ್ನು ಜಿಲ್ಲಾ ಉಸ್ತುವಾರಿಯಿಂದ ಬದಲಾಯಿಸುವ ಹುನ್ನಾರ ಇವರದೆ ಎಂದು ನಮಗೆ ಅನುಮಾನವಿದೆ. ಇಂತಹ ವಿಚಾರವನ್ನು ಅವರು ಮನಸ್ಸಿನಲ್ಲಿಟ್ಟುಕೊಂಡಿದ್ದರೆ ಈಗಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

– ರಾಜಣ್ಣ, ನೀರಾವರಿ ಹೋರಾಟ ಸಮಿತಿ ಸದಸ್ಯರು, ಹಾಗಲವಾಡಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link