ಬೆಂಗಳೂರು:
ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ಉದ್ಯಾನನಗರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಂದಿನ ತಿಂಗಳು ನವೆಂಬರ್ ನಲ್ಲಿ ಕಂಬಳ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬುಧವಾರ ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ ಅಂದರೆ ಭೂಮಿ ಪೂಜೆ ಕಾರ್ಯಕ್ರಮ ಏರ್ಪಟ್ಟಿತ್ತು.
ನವೆಂಬರ್ ತಿಂಗಳ 24, 25, 26ರಂದು ಕಂಬಳ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಈ ಹಿನ್ನೆಲೆ ಇಂದಿನಿಂದ ಕಂಬಳಕ್ಕಾಗಿ ಅಖಾಡ ಸಿದ್ಧಗೊಳ್ಳಲಿದೆ. ಕರೆ ಪೂಜೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸದಾನಂದ ಗೌಡ ಹಾಗೂ ಅಶ್ವತ್ ನಾರಾಯಣ್, ಸಂಗೀತ ನಿರ್ದೇಶನ ಗುರುಕಿರಣ್, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಭಾಗಿಯಾಗಿದ್ದಾರೆ.
ಈ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರವೇಶಿಸಿ ಹೈಡ್ರಾಮಾ ನಡೆಯಿತು. ವೇದಿಕೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಷಣ ಮಾಡುತ್ತಿದ್ದ ವೇಳೆ ಏಕಾಏಕಿ ವೇದಿಕೆಯ ಮುಂಭಾಗಕ್ಕೆ ಬಂದ ಆರ್ ಆರ್ ನಗರ ಶಾಸಕ ಮುನಿರತ್ನ ಹೈಡ್ರಾಮಾ ಸೃಷ್ಟಿಸಿದರು. ಡಿಕೆಶಿ ಭಾಷಣದ ವೇಳೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಶಾಸಕ ಮುನಿರತ್ನ ಬೆಂಬಲಿಗರು ಗದ್ದಲ ಆರಂಭಿಸಿದರು.
ಮುನಿರತ್ನ ಬೆಂಬಲಿಗರು ಗದ್ದಲ ಆರಂಭಿಸುತ್ತಿದ್ದ ಪಕ್ಷಾತೀತವಾಗಿ ನಡೆಯುತ್ತಿದ್ದ ಕಾರ್ಯಕ್ರಮ ಹಾಳಾಗೋದು ಬೇಡ ಎಂದು ಕಂಬಳದ ಆಯೋಜನೆಯ ಕಾರ್ಯಕರ್ತರು ಎಲ್ಲರನ್ನೂ ತಡೆಯಲು ಪ್ರಯತ್ನಿಸಿದರು. ಈ ವೇಳೆ ಗದ್ದಲ ಹೆಚ್ಚಾಗುತ್ತಿದ್ದಂತೆ ಪೊಲೀಸರು ಎಲ್ಲರನ್ನೂ ಚದುರಿಸಿದರು.
ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಂದು ಮೈಸೂರಿಗೆ ಹೋಗಲು ತಯಾರಾಗುತ್ತಿದ್ದ ಡಿಕೆ ಶಿವಕುಮಾರ್ ಬಳಿ ಬಂದ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್ ಕಾಲಿಗೆ ಬಿದ್ದು ಕೈಮುಗಿದು, ಆರ್ ಆರ್ ನಗರ ಕ್ಷೇತ್ರಕ್ಕೆ ಅನುದಾನ ನೀಡಿ ಎಂದು ಮನವಿ ಮಾಡಿ ಮನವಿ ಪತ್ರ ನೀಡಿದರು.