ನವದೆಹಲಿ:
ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರು ಬುಧವಾರ ಭೂಮಿಗೆ ಹಿಂದಿರುಗಲಿದ್ದಾರೆ. ಕೇವಲ 8 ದಿನದ ಅಧ್ಯಯನಕ್ಕೆಂದು ತೆರಳಿದ್ದ ಅವರು 9 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡಿದ್ದರು. ಇದೀಗ ನಾಸಾ ಅಧಿಕೃತವಾಗಿ ಅವರು ಭೂಮಿಗೆ ಬರುತ್ತಿರುವುದನ್ನು ಧೃಡಪಡಿಸಿದೆ.
ಸುನಿತಾ ವಿಲಿಯಮ್ಸ್ ಅವರಿಗೆ ಭೂಮಿಗೆ ಸ್ವಾಗತ ಕೋರಿ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಂಗಳವಾರ ಹಂಚಿಕೊಂಡ ಮಾರ್ಚ್ 1 ರಂದು ಬರೆದ ಪತ್ರದಲ್ಲಿ, ಪ್ರಧಾನಿಯವರು, ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಾಜಿ ಅಧ್ಯಕ್ಷ ಜೋ ಬೈಡನ್ ಬಳಿ ಸುನಿತಾ ವಿಲಿಯಮ್ಸ್ ಅವರ ಆರೋಗ್ಯ ವಿಚಾರಿಸಿದ್ದೇನೆ ಎಂದು ಹೇಳಿದ್ದಾರೆ.
ಈ ತಿಂಗಳು ದೆಹಲಿಯಲ್ಲಿ ನಾಸಾದ ಮಾಜಿ ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಅವರೊಂದಿಗಿನ ಸಭೆಯಲ್ಲಿ ಸುನಿತಾ ವಿಲಿಯಮ್ಸ್ ಅವರನ್ನು ನೆನಪಿಸಿಕೊಳ್ಳಲಾಯಿತು ಎಂದು ಮೋದಿ ಹೇಳಿದ್ದಾರೆ. ನಿಮ್ಮ ಬಗ್ಗೆ ಮತ್ತು ನಿಮ್ಮ ಕೆಲಸದ ಬಗ್ಗೆ ನಮಗೆ ಎಷ್ಟು ಹೆಮ್ಮೆಯಿದೆ ಎಂದು ನಾವು ಚರ್ಚಿಸಿದ್ದೇವೆ. ಈ ಸಂವಾದದ ನಂತರ, ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. 1.4 ಶತಕೋಟಿ ಭಾರತೀಯರು ನಿಮ್ಮ ಸಾಧನೆಗಳ ಬಗ್ಗೆ ಯಾವಾಗಲೂ ಹೆಮ್ಮೆ ಪಡುತ್ತಾರೆ. ನಿಮ್ಮ ಈ ಸಾಧನೆ ನಿಮ್ಮ ಸ್ಪೂರ್ತಿದಾಯಕ ಧೈರ್ಯ ಮತ್ತು ಪರಿಶ್ರಮವನ್ನು ಪ್ರದರ್ಶಿಸಿವೆ ಎಂದು ಹೇಳಿದ್ದಾರೆ.
ಪತ್ರದಲ್ಲಿ ಸುನಿತಾ ತಾಯಿ ಬೋನಿ ಪಾಂಡ್ಯ ಅವರ ಬಗ್ಗೆ ಉಲ್ಲೇಖಿಸಿರುವ ಮೋದಿ, ನಿಮ್ಮ ತಾಯಿ ನಿಮ್ಮ ಬರುವಿಕೆಗಾಗಿ ಉತ್ಸುಕತೆಯಿಂದ” ಕಾಯುತ್ತಿರಬೇಕು. ದಿವಂಗತ ದೀಪಕ್‌ಭಾಯ್ ಅವರ ಆಶೀರ್ವಾದ ನಿಮ್ಮೊಂದಿಗೂ ಇದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದ್ದಾರೆ. ಸುನಿತಾ ತಂದೆ ದೀಪಕ್ ಪಾಂಡ್ಯ ಗುಜರಾತ್ ರಾಜ್ಯದವರಾಗಿದ್ದು, 2020 ರಲ್ಲಿ ನಿಧನರಾಗಿದ್ದಾರೆ. 2016 ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುನಿತಾ ಹಾಗೂ ಅವರ ಕುಟುಂಬವನ್ನು ಭೇಟಿಯಾಗಿರುವ ಕ್ಷಣವನ್ನು ಪ್ರಧಾನಿ ನೆನಪಿಸಿಕೊಂಡಿದ್ದಾರೆ.
ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನೀವು ನಮ್ಮ ಹೃದಯಗಳಿಗೆ ಹತ್ತಿರವಾಗಿದ್ದೀರಿ. ಭಾರತದ ಜನರು ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯಾಚರಣೆಯಲ್ಲಿ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ನೀವು ಹಿಂದಿರುಗಿದ ನಂತರ, ಭಾರತದಲ್ಲಿ ನಿಮ್ಮನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ. ಭಾರತದ ಹೆಮ್ಮೆಯ ಪುತ್ರಿ ಇಂತಹ ಶ್ರೇಷ್ಠ ಸಾಧನೆ ಮಾಡಿರುವುದು ನಮಗೆಲ್ಲ ಖುಷಿಯ ಸಂಗತಿ ಎಂದು ಅವರು ಹೇಳಿದ್ದಾರೆ.
