ಲಂಡನ್:
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಲಂಡನ್ ಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು 120 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಅವರು ಸಹಿ ಮಾಡಲಿರುವ ಭಾರತ- ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಂಗಳವಾರ ಸಂಪುಟ ಅನುಮೋದನೆ ನೀಡಿದೆ. 2030ರ ವೇಳೆಗೆ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು 120 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ಭಾರತ ಮತ್ತು ಯುಕೆ ಮೇ ತಿಂಗಳಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಪೂರ್ಣಗೊಳಿಸಿತ್ತು.
ಜುಲೈ 24ರ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಲಂಡನ್ ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಎಂದು ಕರೆಯಲ್ಪಡುವ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಅವರೊಂದಿಗೆ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ಇರಲಿದ್ದಾರೆ.
ಇದೇ ಸಂದರ್ಭದಲ್ಲಿ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಬಗ್ಗೆ ಪ್ರಧಾನಿ ಮೋದಿ ಅವರು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅವರು ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಮಾಹಿತಿ ವಿನಿಮಯ ನಡೆಸುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಯುಕೆಯು ಭಾರತದಲ್ಲಿ ಆರನೇ ಅತಿದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದೆ. ಅದು 36 ಶತಕೋಟಿ ಡಾಲರ್ ಹೂಡಿಕೆಯನ್ನು ಭಾರತದಲ್ಲಿ ಹೊಂದಿದೆ. ಭಾರತವು ಕೂಡ ಯುಕೆಯಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಿದೆ. ಸುಮಾರು 20 ಶತಕೋಟಿ ಡಾಲರ್ ಭಾರತದ ಹೂಡಿಕೆ ಇದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
ಕೇಂದ್ರ ವಾಣಿಜ್ಯ ಸಚಿವಾಲಯದ ಮಾಹಿತಿಯನ್ವಯ ಈ ಒಪ್ಪಂದದ ಪ್ರಕಾರ ಇದು ಯುಕೆಯಲ್ಲಿ ತಾತ್ಕಾಲಿಕ ಕೆಲಸದ ವೀಸಾಗಳಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಮೂರು ವರ್ಷಗಳ ಕಾಲ ಸಾಮಾಜಿಕ ಭದ್ರತೆ ವಿಚಾರದಲ್ಲಿ ವಿನಾಯಿತಿ ನೀಡುತ್ತದೆ. ಇದರಿಂದ ಅವರ ಸಂಬಳದ ಸುಮಾರು ಶೇ. 20ರಷ್ಟು ಉಳಿತಾಯವಾಗುವುದು. ಇದರಿಂದ 60,000 ಕ್ಕೂ ಹೆಚ್ಚು ಭಾರತೀಯ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.
ಭಾರತವು ಯುಕೆ ವಿಸ್ಕಿ ಮತ್ತು ಜಿನ್ ಮೇಲಿನ ಸುಂಕವನ್ನು ಶೇ. 150 ರಿಂದ ಶೇ.75 ಮತ್ತು ಶೇ. 40ಕ್ಕೆ ಇಳಿಸಲಿದೆ. ಆಟೋಮೋಟಿವ್ ಉತ್ಪನ್ನಗಳ ಮೇಲಿನ ಸುಂಕಗಳು ಶೇ. 100ರಿಂದ ಶೇ. 10ಕ್ಕೆ ಇಳಿಕೆ ಮಾಡಲಿದೆ. ಆಮದು ಸುಂಕಗಳನ್ನು ಕಡಿಮೆ ಮಾಡಿ ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ಮಾಡಿಕೊಡುತ್ತದೆ. ಇದರಲ್ಲಿ ಸೌಂದರ್ಯವರ್ಧಕಗಳು, ಏರೋಸ್ಪೇಸ್, ವೈದ್ಯಕೀಯ ಸಾಧನಗಳು, ವಿದ್ಯುತ್ ಯಂತ್ರೋಪಕರಣಗಳು, ತಂಪು ಪಾನೀಯಗಳು, ಚಾಕೊಲೇಟ್ ಮತ್ತು ಬಿಸ್ಕತ್ತುಗಳು ಸೇರಿವೆ.
