ಕೋಲ್ಕತ್ತಾ:
ಕಡಿಮೆ ಗೋಚರತೆಯ ಕಾರಣದಿಂದಾಗಿ ಶನಿವಾರ ಪಶ್ಚಿಮ ಬಂಗಾಳದ ತಾಹೆರ್‌ಪುರ್ ಹೆಲಿಪ್ಯಾಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಇಳಿಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವರ್ಚುವಲ್ ಭಾಷಣ ಮಾಡಿದ ಅವರು ರ‍್ಯಾಲಿಯಲ್ಲಿ ಭಾಗವಹಿಸಿದ್ದ ಜನರಲ್ಲಿ ಕ್ಷಮೆಯಾಚಿಸಿದರು. ಬಳಿಕ ಮಾತನಾಡಿದ ಅವರು ತೃಣಮೂಲ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿ, ನಾವು ಸೋತರೂ ಪರ್ವಾಗಿಲ್ಲ. ಇಲ್ಲಿನ ಪ್ರಗತಿ ನಿಲ್ಲಬಾರದು ಎಂದು ಅವರು, ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಅಕ್ರಮ ವಲಸಿಗರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದ ತಾಹೆರ್‌ಪುರ್ ನಲ್ಲಿ ಶನಿವಾರ ಆಯೋಜಿಸಿದ್ದ ಮೋದಿ ರ‍್ಯಾಲಿ ದಟ್ಟ ಮಂಜು ಅಡ್ಡಿಯಾಗಿದ್ದರಿಂದ ಪ್ರಧಾನಿ ಮೋದಿ ಅವರು ನಾಡಿಯಾದಲ್ಲಿ ವರ್ಚುವಲ್ ಭಾಷಣ ಮಾಡಿದರು. ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ವೈಯಕ್ತಿಕವಾಗಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದರು.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಅವರು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಅಕ್ರಮ ವಲಸಿಗರನ್ನು ರಕ್ಷಿಸುತ್ತಿದೆ. ಅದಕ್ಕಾಗಿಯೇ ಅವರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸುತ್ತಿದ್ದಾರೆ ಎಂದ ಅವರು, ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರಕ್ಕೆ ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ನಮ್ಮನ್ನು ತೃಣಮೂಲ ಪಕ್ಷವು ವಿರೋಧಿಸಲಿ. ಆದರೆ ಬಂಗಾಳದ ಪ್ರಗತಿಯನ್ನು ನಿಲ್ಲಿಸಬಾರದು ಎಂದ ಅವರು, ಅದು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಆಡಳಿತ ವ್ಯವಸ್ಥೆಯ ಓಲೈಕೆಯು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತಡೆಯುತ್ತಿದೆ ಎಂದರು.
ರ‍್ಯಾಲಿಗೆ ಹೋಗುತ್ತಿದ್ದಾಗ ನಡೆದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕೆಲವು ಬಿಜೆಪಿ ಕಾರ್ಯಕರ್ತರ ಸಾವಿಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ಶನಿವಾರ ಮಧ್ಯಾಹ್ನ ತಾಹೆರ್‌ಪುರ್ ಹೆಲಿಪ್ಯಾಡ್‌ನಲ್ಲಿ ಇಳಿಯಬೇಕಿತ್ತು. ಆದರೆ ಕಡಿಮೆ ಗೋಚರತೆಯ ಕಾರಣದಿಂದ ಅವರ ಹೆಲಿಕಾಪ್ಟರ್ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು. ಅಲ್ಲಿಂದ ನಾಡಿಯಾ ಜಿಲ್ಲೆಗೆ ತೆರಳಿದ ಮೋದಿ ತಾಹೆರ್‌ಪುರ ರ‍್ಯಾಲಿಗಾಗಿ ಅಲ್ಲಿಂದಲೇ ವರ್ಚುವಲ್ ಭಾಷಣ ಮಾಡಿದರು.








