ಪಾಟ್ನ:
ಗುಜರಾತ್‌ನಲ್ಲಿ ದಾಖಲೆಯ ಗೆಲುವಿನಿಂದ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು “ಇಡೀ ದೇಶದ ಸಂಪತ್ತನ್ನು ತಮ್ಮ ತವರು ರಾಜ್ಯಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ” ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಬುಧವಾರ ಆರೋಪಿಸಿದ್ದಾರೆ.
2014 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅದ್ಭುತ ಗೆಲುವಿಗೆ ಕಾರಣರಾದ I-PAC ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಇಂದು ಜನ್ ಸುರಾಜ್ ಎಂಬ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ.ಪಾಟ್ನಾದ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಗುಜರಾತಿನ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬ ಭಾವನೆಯಿಂದ ಮೋದಿಯವರ ಭಾಷಣಗಳನ್ನು ಕೇಳಿ ನನ್ನಂತಹ ಜನ ಮೋದಿ ಅವರಿಗೆ ಮತ ಹಾಕಿದ್ದಾರೆ.
ನಿಜಕ್ಕೂ ಗುಜರಾತ್ ಪ್ರಗತಿಯಲ್ಲಿದೆ. ಇಡೀ ದೇಶದ ಸಂಪತ್ತನ್ನು ಗುಜರಾತಿಗೆ ತಿರುಗಿಸಿ ಅಲ್ಲಿ ಪ್ರತಿ ಹಳ್ಳಿಗಳಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲಾಗುತ್ತಿದೆ. ಬಿಹಾರದ ಜನರು ಉದ್ಯೋಗ ಅರಸಿ ಆ ರಾಜ್ಯಕ್ಕೆ ಗುಳೆ ಹೋಗುತ್ತಿದ್ದಾರೆ ಎಂದು ಕಿಶೋರ್ ಆರೋಪಿಸಿದರು.
“ನಾವು ಗುಜರಾತ್ ಬೆಳವಣಿಗೆಗೆ ಮತ ಹಾಕಿದರೆ ಬಿಹಾರದ ಜನ ಹೇಗೆ ಅಭಿವೃದ್ಧಿ ಹೊಂದುತ್ತಾರೆ?” ಎಂದು ಪ್ರಶ್ನಿಸಿದರು.ಪ್ರಶಾಂತ್ ಕಿಶೋರ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವುದು ಬಿಹಾರದ ರಾಜಕೀಯದ ಮೇಲೆ ಪ್ರಬಲವಾದ ಪರಿಣಾಮ ಉಂಟು ಮಾಡುವ ನಿರೀಕ್ಷೆ ಇದೆ.