ದುಬೈ:
ಪ್ರಧಾನಿ ನರೇಂದ್ರ ಮೋದಿ ನಿನ್ನೆ ಒಮಾನ್ಗೆ ಬಂದಿಳಿದರು. ಇದು ಅವರ ಮೂರು ರಾಷ್ಟ್ರಗಳ ಮಹತ್ವದ ಪ್ರವಾಸದ ಕೊನೆಯ ಹಂತವಾಗಿದೆ. ಭಾರತೀಯ ಪ್ರಧಾನಿ ಮತ್ತು ಅವರ ಜೊತೆಗಿದ್ದ ನಿಯೋಗವನ್ನು ಒಮಾನ್ನ ರಕ್ಷಣಾ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರು ಮಸ್ಕತ್ನ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ಘನತೆವೆತ್ತ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆಗಳನ್ನು ನಡೆಸಲಿದ್ದಾರೆ.
ಮಸ್ಕತ್ನಲ್ಲಿ ಭಾರತೀಯ ವಲಸಿಗರು ಪ್ರಧಾನಿಯವರಿಗೆ ಅದ್ದೂರಿ ಸ್ವಾಗತ ನೀಡಿದರು. ಯಕ್ಷಗಾನ, ಹಿಂದಿ ಗೀತೆಗಳು, ಕೂಚಿಪುಡಿ ನೃತ್ಯವನ್ನು ಪ್ರದರ್ಶಿಸಿ ಮೋದಿಯನ್ನು ಸ್ವಾಗತಿಸಿದರು. ಈ ವೇಳೆ ಅಲ್ಲಿ ಸೇರಿದ್ದ ಭಾರತೀಯರು ತ್ರಿವರ್ಣ ಧ್ವಜ ಹಿಡಿದು ‘ಮೋದಿ, ಮೋದಿ’, ‘ವಂದೇ ಮಾತರಂ’ ಘೋಷಣೆಗಳನ್ನು ಕೂಗುತ್ತಾ ಹರ್ಷೋದ್ಘಾರ ಮಾಡಿದರು. ಹೋಟೆಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಅನಿವಾಸಿಗಳನ್ನು ಪ್ರಧಾನಿ ಮೋದಿ ಭೇಟಿಯಾಗಿ, ಅವರೊಂದಿಗೆ ಸಂವಾದ ನಡೆಸಿದರು. ಸ್ವಾಗತ ಸಮಾರಂಭದ ಭಾಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಪ್ರದರ್ಶನಗಳನ್ನು ಸಹ ಅವರು ವೀಕ್ಷಿಸಿದರು.
ಇದಕ್ಕೂ ಮುನ್ನ, ಜೋರ್ಡಾನ್ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ, ಅಲ್ಲಿನ ಅಧ್ಯಕ್ಷರ ಜೊತೆಗೆ ಐದು ಪ್ರಮುಖ ವ್ಯಾಪಾರ ಒಪ್ಪಂದ ಮಾಡಿಕೊಂಡ ಬಳಿಕ ಇಥಿಯೋಪಿಯಾಗೆ ತೆರಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾ ರಾಷ್ಟ್ರದ ಅತ್ಯನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ನರೇಂದ್ರ ಮೋದಿ ಅವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಪ್ರಧಾನಿಯಾಗಿದ್ದಾರೆ.
ಅಡಿಸ್ ಅಬಾಬಾದ ಅಡಿಸ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿಯಾದ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಮಂಗಳವಾರ ಪ್ರದಾನ ಮಾಡಿದರು.








